ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ವಿರೋಧಿಸಿ ಮತ್ತು ತಾಯಿ ಚಾಮುಂಡೇಶ್ವರಿಯ ಗೌರವ ಸಂರಕ್ಷಣೆಗಾಗಿ ಅ.13ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟ ಚಲೋ ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಸಂಸದ ಪ್ರತಾಪ ಸಿಂಹ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಹತ್ತಲಾಗುವುದು. ವಾಹನಗಳಲ್ಲಿ ಬರುವವರು ವಾಹನದಲ್ಲಿ ಬರಬಹುದು. ಐದು ಸಾವಿರ ಮಂದಿ ದಿನವಿಡೀ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಲಾಗುವುದು. ನಾನು ಪೊಲೀಸ್ ಸೇರಿದಂತೆ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ. ನಾವು ಹಮ್ಮಿಕೊಂಡಿರುವ ಚಲೋಗೆ ಅವಕಾಶ ನೀಡುವಂತೆ ಕೋರುತ್ತೇನೆ ಎಂದು ಹೇಳಿದರು.
ನಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪ್ಪದೇ ಪಾಲ್ಗೊಳ್ಳಿ. ಕೆಲವರು ಮಾಡುತ್ತಿರುವ ಅನಾಚಾರ ತಡೆಯಲು ಭಕ್ತರು ಕೈಜೋಡಿಸಬೇಕು. ಅವಮಾನ ಮಾಡಿ ನಿಂದಿಸುವವರನ್ನು ಸಹಿಸಬಾರದು. ಆಕ್ರೋಶ ಬಂದಿರುವವರೆಲ್ಲರೂ ಸಂಘಟಿತರಾಗಿ ವ್ಯಕ್ತ ಮಾಡೋಣ ಎಂದು ಕೋರಿದರು.
ಧರ್ಮಾತೀತ, ಪಕ್ಷಾತೀತವಾಗಿ ಎಲ್ಲರೂ ಬರಬೇಕು. ಮಹಿಷ ದಸರಾ ತಡೆಯುವ ಉದ್ದೇಶದಿಂದ ಸಂಘರ್ಷಕ್ಕೂ ಸಿದ್ಧವಿದ್ದೇವೆ. ಸಿದ್ಧಾಂತದ ಎಲ್ಲೆಯನ್ನು ಮೀರಿ ಅವಮಾನ ಮಾಡಿ ನಂತರ ಪೂಜಿಸುವುದು ಅನೈತಿಕ ಅಲ್ಲವೇ ಎಂದು ಪ್ರಶ್ನಿಸಿದರು.
ಈ ಬಾರಿ ನಡೆಯುತ್ತಿರುವುದು 414ನೇ ದಸರಾ. ಮಹಾರಾಜರ ಕಾಲದಿಂದ ಯಾವುದೇ ಸರ್ಕಾರದಲ್ಲಿ ನಿರಂತರವಾಗಿ ದಸರಾ ನಡೆದುಕೊಂಡು ಬರುತ್ತಿದೆ. ಈ ಬಾರಿಯೂ ಚೊಕ್ಕವಾಗಿ ನಡೆಯಬೇಕು ಎಂಬುದು ನಮ್ಮ ಆಶಯ. ರೂಢಿಗತವಾಗಿ ನಡೆದುಕೊಂಡು ಬಂದಿರುವುದು ಜನರಿಗೆ ಗೊತ್ತು.
2015-16ರ ವೇಳೆ ಮಹಿಷ ದಸರಾ ಆಚರಿಸಿದರು. ದೆವ್ವ ಅದ್ಯಾವಾಗ ದೇವರಾಯ್ತು ಎಂಬುದು ಗೊತ್ತಿಲ್ಲ. ಮೂಲನಿವಾಸಿಗಳ ದೇವರಂತೆ ನಮಗೆ ಗೊತ್ತಿಲ್ಲ. ಮರು ವರ್ಷ ಮೆರವಣಿಗೆ ನಡೆಸಿದರು. ನಮ್ಮ ಸರ್ಕಾರದಲ್ಲಿ ಚಾಮುಂಡಿಗೆ ಅವಮಾನ ಮಾಡುವಂತಹ ಕೆಲಸ ನಿಲ್ಲಿಸಿದ್ದೆವು. ಅನೈತಿಕ ಕೆಲಸವನ್ನು ನಿಲ್ಲಿಸಿದ್ದೆವು. ಆ ಅನಾಚಾರಕ್ಕೆ ನಾವು ಅವಕಾಶ ಕೊಟ್ಟಿರಲಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ವಕ್ತಾರ ಮಹೇಶ್ ರಾಜೇ ಅರಸ್ ಇದ್ದರು.