ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ದಿನ ಕಳೆದಂತೆ ಚಿತ್ರವಿಚಿತ್ರ ಕಳ್ಳತನ ಪ್ರಕರಣಗಳು ಬಯಲಾಗುತ್ತಿರುತ್ತವೆ. ಮನೆ, ಎಟಿಎಂ, ದೇವಾಲಯ ಹೀಗೆ ವಿವಿಧ ಕಡೆಗಳಲ್ಲಿ ಕಳವು ಮಾಡುತ್ತಿದ್ದ ಖದೀಮರು ಈಗ ರಸ್ತೆ ಪಕ್ಕದಲ್ಲಿರುವ ಬಸ್ ನಿಲ್ದಾಣವನ್ನೇ ದೋಚಿಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದಾರೆ.
ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿದ್ದ ಬಸ್ ನಿಲ್ದಾಣವೇ ಈಗ ಕಳವಾಗಿರುವುದು. ಈ ಬಸ್ ನಿಲ್ದಾಣವನ್ನು ನಿರ್ಮಿಸಿ ಇನ್ನೂ 10 ದಿನಗಳು ಕಳೆದಿಲ್ಲ ಅಷ್ಟರಲ್ಲಾಗಲೇ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿಂದ ನಿರ್ಮಿಸಲಾಗಿದ್ದ ನಿಲ್ದಾಣ ಕಳ್ಳರ ಪಾಲಾಗಿದ್ದು, ಸದ್ಯ ಈ ಸಂಬಂಧ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ನಿತ್ಯ ಈ ಬಸ್ ನಿಲ್ದಾಣದಿಂದ ಓಡಾಡುವ ಸಾರ್ವಜನಿಕರು ಮರು ದಿನ ಬಂದು ನೋಡಿದಾಗ ಬಸ್ ನಿಲ್ದಾಣವೇ ಮಾಯವಾಗಿದೆ ಎಂದು ಗಾಬರಿಪಟ್ಟುಕೊಂಡು ನಾವು ಬೇರೆ ಸ್ಥಳಕ್ಕೆ ಬಂದಿದ್ದೇವಾ ಎಂದು ಕೊಂಚ ತಬ್ಬಿಬ್ಬಾಗಿದ್ದಾರೆ. ಅರ್ರೆ, ಒಂದು ವೇಳೆ ಬಸ್ ನಿಲ್ದಾಣ ಬದಲಾಗಿದೆಯೇ? ಇಲ್ಲಿ ಬಸ್ ನಿಲ್ಲಿಸುವುದಿಲ್ಲವೇ? ಸಮೀಪದಲ್ಲಿ ಬೇರೆ ಕಡೆ ಏನಾದರೂ ನಿಲ್ದಾಣ ಮಾಡಿದ್ದಾರಾ? ಎಂದು ಅತ್ತಿಂದಿತ್ತ ಹೋಗಿ ನೋಡಿದ್ದಾರೆ. ಎಲ್ಲಿಯೂ ಬಸ್ ನಿಲ್ದಾಣ ಕಾಣಿಸಲಿಲ್ಲ.
ಇನ್ನು ಅಲ್ಲಿಗೆ ಬಸ್ ಬಂದಾಗ ಚಾಲಕರು ಸಹ ಒಂದು ಕ್ಷಣ ಅವಾಕ್ ಆಗಿದ್ದು, ಹೌದೋ ಅಲ್ಲವೋ ಎಂಬ ಅನುಮಾನದಲ್ಲಿಯೇ ಬಸ್ ನಿಲ್ಲಿಸಿದ್ದಾರೆ. ಬಳಿಕ ನಿಲ್ದಾಣ ಕಳುವಾಗಿರುವುದು ಎಲ್ಲರಿಗೂ ಗೊತ್ತಾಗಿದೆ. ಸದ್ಯ ಈಗ ಪ್ರಯಾಣಿಕರು ಫುಟ್ಪಾತ್ನಲ್ಲಿಯೇ ಬಸ್ಗಾಗಿ ಕಾದು ನಿಂತು ಪ್ರಯಾಣಿಸುತ್ತಿದ್ದಾರೆ.
ಉಕ್ಕು ಸಹಿತ ನಿರ್ಮಾಣವಾಗಿದ್ದ ಅತ್ಯಾಧುನಿಕ ಓವರ್ಹೆಡ್ ಶೆಲ್ಟರ್ಅನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಸುಮಾರು 10 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಪೊಲೀಸರಿಂದ ಶೋಧ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ತಂಗುದಾಣಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿರುವ ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್. ರವಿ ರೆಡ್ಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಳ್ಳತನದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದಾರೆ.
ಒಂದು ತಿಂಗಳ ಬಳಿಕ ಪ್ರಕರಣ ಬೆಳಕಿಗೆ: ಈ ಸಂಬಂಧ ಎನ್. ರವಿ ರೆಡ್ಡಿ ಅವರು ಸೆ. 30ರಂದು ದೂರು ದಾಖಲಿಸಿದ್ದಾರೆ. ಆದರೆ, ಅವರಿಗೂ ಕಳ್ಳತನವಾಗಿ ಒಂದು ತಿಂಗಳ ನಂತರ ವಿಷಯ ಗೊತ್ತಾಗಿದೆ. ಆದರೆ, ನಿರ್ಮಾಣ ಮಾಡಿದ ಒಂದು ವಾರದಲ್ಲಿಯೇ ಕಳ್ಳತನವಾಗಿದೆ ಎಂಬುದು ತಡವಾಗಿ ಗೊತ್ತಾಗಿದ್ದಾಗಿ ಹೇಳಲಾಗಿದೆ.
ಹೀಗೆಯೇ ಹಲವು ಕಡೆ ಕಳ್ಳತನ: ಕನ್ನಿಂಗ್ಹ್ಯಾಮ್ ರಸ್ತೆಯ ಬಸ್ ನಿಲ್ದಾಣ ಮಾತ್ರವಲ್ಲ. ಬೆಂಗಳೂರಿನ ಹಲವು ಬಸ್ ನಿಲ್ದಾಣಗಳನ್ನು ಸಹ ಈ ಹಿಂದೆ ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿದೆ. ಎಚ್ಆರ್ಬಿಆರ್ ಲೇಔಟ್, ಕಲ್ಯಾಣ್ ನಗರ, ದೂಪನಹಳ್ಳಿ, ಬಿಇಎಂಎಲ್ ಲೇಔಟ್ 3ನೇ ಹಂತ, ರಾಜರಾಜೇಶ್ವರಿ ನಗರ ಸೇರಿದಂತೆ ಇತರ ಬಸ್ ನಿಲ್ದಾಣಗಳು ಕಾಣೆಯಾಗಿರುವ ಬಗ್ಗೆ ವರದಿಗಳಾಗಿವೆ.