ಮೈಸೂರು: ನಂಜಗೂಡು ತಾಲೂಕಿನ ಹುಲಹಳ್ಳಿ ಹೋಬಳಿಯ ಚಂದ್ರವಾಡಿ ಗ್ರಾಮದಲ್ಲಿ 5 ರಿಂದ 6 ಗಂಡಾನೆಗಳು ಹಿಂಡು ಎರಡು ದಿನಗಳಿಂದ ರೈತರ ಜಮೀನುಗಳಿಗೆ ದಾಳಿ ಮಾಡಿ ಫಸಲನ್ನು ನಾಶ ಮಾಡಿವೆ.
ಚಿಕ್ಕದೇವಮ್ಮನ ಬೆಟ್ಟದ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು ಚಂದ್ರವಾಡಿ ಗ್ರಾಮದ ತಿಮ್ಮನಾಯಕ ತೋಪನಾಯ್ಕ ಎಂಬುವರಿಗೆ ಸೇರಿದ ಸುಮಾರು 6 ಎಕರೆಯಲ್ಲಿ ಬೆಳೆದಿದ್ದ ರಾಗಿ ಮುಸುಕಿನ ಜೋಳ, ಬಾಳೆ ಮುಂತಾದ ಬೆಳೆಗಳನ್ನು ತಿಂದು ತುಳಿದು ಹಾಳು ಮಾಡಿವೆ.
ಸಿದ್ದನಾಯ್ಕ ಎಂಬವರಿಗೆ ಸೇರಿದ ಪಂಪ್ ಸೆಟ್‌ನ ಬೋರ್ ವೆಲ್‌ಗಳನ್ನು ಕಿತ್ತು ಹಾಳು ಮಾಡಿವೆ. ಅಷ್ಟೇ ಅಲ್ಲದೆ ಚಂದ್ರವಾಡಿ, ಲಂಕೆ, ಅಲ್ಲಯ್ಯನಪುರ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಸಾಲ ಸೋಲ ಮಾಡಿ ರೈತರು ಬೆಳೆದ ಫಸಲುಗಳನ್ನು ಕಾಡಾನೆಗಳು ತಿಂದು ತುಳಿದು ನಾಶ ಮಾಡುತ್ತಿವೆ.
ಒಂದು ಕಡೆ ಸರಿಯಾದ ಬೆಲೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದು ಮತ್ತೊಂದು ಕಡೆ ಕಾಡಾನೆಗಳ ದಾಳಿಯಿಂದ ಕಂಗಲಾಗಿದ್ದಾರೆ. ಹಲವು ದಿನಗಳಿಂದಲೂ ಕಾಡಾನೆ ಹಾವಳಿಯಿದ್ದು ಅರಣ್ಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಇನ್ನು ಈ ಭಾಗದಲ್ಲಿ ಕಾಡಾನೆಗಳು ಗುಂಪು ಗುಂಪಾಗಿ ಓಡಾಡುತ್ತಿದ್ದು ಸಾಕಷ್ಟು ಬೆಳೆ ಹಾನಿಗೊಳಗಾಗಿವೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದು, ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮುಂದೆಯಾದರೂ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಇತ್ತ ಗಮನಹರಿಸಿ. ಆನೆಗಳ ಹಿಂಡನ್ನು ಕಾಡಿಗೆ ಓಡಿಸಬೇಕು. ರೈತರ ಬೆಳೆಗಳನ್ನು ರಕ್ಷಿಸಬೇಕೆಂದು ರೈತರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.