ಮೈಸೂರು: ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗುವ ಹಲವು ವಿಶೇಷತೆಗಳಲ್ಲಿ ಫಲಪುಷ್ಪ ಪ್ರದರ್ಶನವೂ ಒಂದಾಗಿದ್ದು, ಈ ಬಾರಿ ವಿಭಿನ್ನ ಮತ್ತು ವಿಶಿಷ್ಟವಾಗಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಚಂದಿರನ ಮೇಲೆ ಲ್ಯಾಂಡ್ ಆಗಿ ವಿಶ್ವದ ಗಮನ ಸೆಳೆದ ಚಂದ್ರಯಾನ-3 ನೌಕೆ ಮತ್ತು ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ವಿಶ್ವಕಪ್ ಟ್ರೋಫಿ ಆಕರ್ಷಣೆಯಾಗಿದೆ.
ಫಲಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಗರದ ನಿಶಾದ್ ಭಾಗ್ (ಕುಪ್ಪಣ್ಣ ಪಾರ್ಕ್)ನಲ್ಲಿ ಅ.15ರಿಂದ ದಸರಾ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ.
ಚಂದ್ರಯಾನ-3, ಏಕದಿನ ಕ್ರಿಕೆಟ್ ವಿಶ್ವಕಪ್‌ನ ಟ್ರೋಫಿ, ಶ್ರೀ ಚಾಮುಂಡೇಶ್ವರಿ ದೇವಿಯ ದೇವಸ್ಥಾನ ಮತ್ತು ಗೋಪುರ ಸೇರಿದಂತೆ ನಾನಾ ಮಾದರಿಯ ಬೃಹತ್ ಹೂವಿನ ಕಲಾಕೃತಿಯನ್ನು ವಿವಿಧ ಸಂಘ, ಸಂಸ್ಥೆ, ಕೈಗಾರಿಕೆಗಳ ಸಹಾಯದಿಂದ ನಿರ್ಮಾಣ ಮಾಡಲಾಗುತ್ತಿದೆ.
ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ ಪ್ರತಿ ಬಾರಿ ಒಂದು ಬೃಹತ್ ಹೂವಿನ ಕಲಾಕೃತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಆ ಕಲಾಕೃತಿಯು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ. ಈ ಬಾರಿ ಇಸ್ರೋ ವಿಜ್ಞಾನಿಗಳ ಸಾಧನೆಯಾಗಿರುವ ಚಂದ್ರಯಾನ-3 ಕಲಾಕೃತಿಯನ್ನು ಹೂವಿನಿಂದ ನಿರ್ಮಿಸಲು ಇಲಾಖೆ ಮುಂದಾಗಿದೆ.
ಇದರ ಜತೆಗೆ ಭಾರತ ತಂಡ ಏಷ್ಯ ಕಪ್ ಕ್ರಿಕೆಟ್ ಜಯಿಸಿದೆ. ಅ.5ರಿಂದ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭವಾಗಿದೆ. ಈ ಮಧ್ಯೆ ಫಲಪುಷ್ಪ ಪ್ರದರ್ಶನದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಟ್ರೋಫಿ ಮಾದರಿಯನ್ನು ನಿರ್ಮಿಸುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಹೆಚ್ಚುವಂತೆ ಮಾಡಲಿದೆ.
ಸೂರ್ಯ ಗ್ರಹಣ ಮಾದರಿಯನ್ನು ಹೂಗಳಿಂದ ನಿರ್ಮಿಸಲು ಇಲಾಖೆ ಮುಂದಾಗಿದೆ. ಸೂರ್ಯ ಗ್ರಹಣ ಹೇಗೆ ಸಂಭವಿಸುತ್ತದೆ, ಸೂರ್ಯ ಗ್ರಹಣ ಎಂದರೆ ಏನು ಎಂಬ ವಿಷಯದ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನವೂ ನಡೆಯಲಿದೆ.
ರಾಜ್ಯ ಸರ್ಕಾರ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುವ ಜತೆಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದು, ಅದರ ಅಂಗವಾಗಿ ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸಂವಿಧಾನ ಪೀಠಿಕೆ ಮಾದರಿಯನ್ನು ನಿರ್ಮಿಸಿ, ಅಲ್ಲಿ ಸಾರ್ವಜನಿಕರಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ.
ಇಷ್ಟೇ ಅಲ್ಲದೆ ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದಿAದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 60 ಸಾವಿರ ಪಾಟ್‌ಗಳಲ್ಲಿ ವಿವಿಧ ಗಿಡಗಳನ್ನ ಬೆಳೆಸಲಾಗುತ್ತಿದೆ. ಚಂದ್ರಯಾನ-3, ಏಕದಿನ ಕ್ರಿಕೆಟ್ ವಿಶ್ವಕಪ್ ಟ್ರೋಫಿ, ಶ್ರೀ ಚಾಮುಂಡೇಶ್ವರಿ ದೇವಿಯ ದೇವಸ್ಥಾನ ಮತ್ತು ಗೋಪುರ ಸೇರಿದಂತೆ ನಾನಾ ಮಾದರಿಯ ಬೃಹತ್ ಹೂವಿನ ಕಲಾಕೃತಿ ವಿವಿಧ ಸಂಘ, ಸಂಸ್ಥೆ, ಕೈಗಾರಿಕೆಗಳ ಸಹಾಯದಿಂದ ನಿರ್ಮಾಣ ಮಾಡಲಾಗುತ್ತಿದೆ.
60 ಸಾವಿರ ಪಾಟ್‌ಗಳಲ್ಲಿ ನಾನಾ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಊಟಿ, ಕಲ್ಕತ್ತಾ, ಪುಣೆ ಸೇರಿದಂತೆ ವಿವಿಧೆಡೆಯಿಂದ 6 ಸಾವಿರ ಅಲಂಕಾರಿಕ ಗಿಡಗಳನ್ನು ತರಿಸಲಾಗುತ್ತದೆ. ಪ್ರತಿ ವರ್ಷ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ವಾರಾಂತ್ಯ ಹಾಗೂ ಆಯುಧ ಪೂಜೆ, ಜಂಬೂಸವಾರಿ ದಿನ 80 ರಿಂದ 90 ಸಾವಿರ ಜನರು ಭೇಟಿ ನೀಡುತ್ತಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಕುಪ್ಪಣ್ಣ ಪಾರ್ಕ್ ನ ಆಯ್ದ ಸ್ಥಳಗಳಲ್ಲಿ, ವಾಕಿಂಗ್ ಪಾಥ್‌ನಲ್ಲಿ ಜೋಡಿಸುವ ಸಲುವಾಗಿ ವಿವಿಧ ಮಾದರಿಯ ಹೂವಿನ ಕುಂಡಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ.
ಫಲಪುಷ್ಪ ಪ್ರದರ್ಶನ ಆರಂಭ ಆರಂಭದಲ್ಲಿ ಈ ಎಲ್ಲ ಹೂಗಳು ತಮ್ಮ ಚೆಲುವನ್ನು ಸೂಸಲಿವೆ. ಪ್ರದರ್ಶನದಲ್ಲಿ ಫ್ರೆಂಚ್ ಮೇರಿ ಗೋಲ್ಡ್, ಡಯಾಂತರ್ಸ್, ವರ್ಬನ, ಬಿಗೋನಿಯಾ, ದಾಲಿಯಾ, ಫೈರ್ ಬುಸ್, ಆರ್ನಮೆಂಟಲ್ ಕೇಲಾ, ಜೀನಿಯಾ, ವಿಂಕಾ, ಸಾಲ್ವಿಯಾ, ಮಾರಿಗೋಲ್ಡ್, ಸ್ವೀಟ್ ವಿಲಿಯಮ್, ಸೆಲೋಶಿಯಾ ಸೇರಿದಂತೆ 28ಕ್ಕೂ ಹೆಚ್ಚು ತಳಿಯ ಗಿಡಗಳನ್ನು ಬೆಳೆಸಲಾಗಿದೆ. ಒಟ್ಟಾರೆಯಾಗಿ ಫಲಪುಷ್ಪ ಪ್ರದರ್ಶನ ಅದ್ಭುತವಾಗಿರಲಿದ್ದು ಹೇಗಿರಲಿದೆ ಎಂಬುದು ಅ.15ರ ನಂತರ ತಿಳಿಯಲಿದೆ.