ಮೈಸೂರು: ರಾಜ್ಯದಲ್ಲಿ ಈ ಬಾರಿ ಬರ ಇರುವುದರಿಂದ ಅದ್ದೂರಿ ದಸರಾ ಆಚರಣೆ ಬದಲಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಮೈಸೂರಿನ ಪ್ರವಾಸೋದ್ಯಮ, ಆರ್ಥಿಕತೆಗೆ ಹಿನ್ನಡೆಯಾಗದಂತೆ ಪ್ರಾಯೋಜಕತ್ವದಲ್ಲಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಅರಮನೆ ಮಂಡಳಿಯಲ್ಲಿ ವಿವಿಧ ಉಪಸಮಿತಿಗಳ ವಿಶೇಷಾಧಿಕಾರಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅದ್ದೂರಿ ದಸರಾ ಆಚರಣೆ ಮಾಡುತ್ತಿಲ್ಲ. ಜತೆಗೆ ಸರಳವೂ ಅಲ್ಲ. ಸಾಂಪ್ರದಾಯಿಕವಾಗಿ, ಪ್ರಾಯೋಜಕತ್ವದಲ್ಲಿ ಆಚರಣೆ ಮಾಡಲಾಗುತ್ತಿದ್ದು, ಹಲವು ಪ್ರಾಯೋಜಕರು ಮುಂದೆ ಬಂದಿದ್ದಾರೆ.
ಎಷ್ಟು ಮಂದಿ ಪ್ರಾಯೋಜಕತ್ವ ಪಡೆಯುತ್ತಾರೆ ಎಂಬ ಮಾಹಿತಿ ಕೆಲ ದಿನಗಳಲ್ಲೇ ತಿಳಿಯುತ್ತದೆ. ಅವರು ಹೆಚ್ಚು ಸ್ಕ್ರೀನ್ ಸ್ಪೇಸ್ ಕೇಳುವುದರಿಂದ ನಮ್ಮ ಇತಿಮಿತಿಯಲ್ಲಿ, ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದಲೂ 15 ಕೋಟಿ ಬಿಡುಗಡೆಯಾಗಿದ್ದು, ಮುಡಾ, ಅರಮನೆ ಮಂಡಳಿಯಿಂದ ಹಣ ಬಳಸಿಕೊಳ್ಳಲು ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರಳ ದಸರಾ ಎಂದು ಚರ್ಚೆ ನಡೆದರೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಸರಳ ಎಂಬ ಪದ ಬಳಕೆ ಮಾಡುವುದರಿಂದ ಪ್ರವಾಸಿಗರು, ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ. ಹಾಗಾಗಿ ಸರಳ ದಸರಾ ಚರ್ಚೆ ಅನಗತ್ಯ. ಪ್ರವಾಸಿಗರಿಗೆ ತೆರಿಗೆ ವಿನಾಯಿತಿ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗಿತ್ತು. ಮತ್ತೊಮ್ಮೆ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತಂದು ನಿರ್ಧರಿಸಲಾಗುವುದು ಎಂದರು.
ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್‌ಪಿ ಸೀಮಾ ಲಾಟ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಭಾಗವಹಿಸಿದ್ದರು.