ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಭಾರಿ ಮೊತ್ತದ ಬಿಟ್ ಕಾಯಿನ್ ದಂಧೆ ಅವ್ಯಹತವಾಗಿ ನಡೆಯುತ್ತಿದ್ದು, ಈ ದಂಧೆಯಲ್ಲಿ ತೊಡಗಿರುವ ಆರೋಪದಡಿ ಈಗಾಗಲೇ ಬನಶಂಕರಿ ಬಿಎಂಟಿಸಿ 20ನೇ ಘಟಕದ 10 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಜಯನಗರ 4ನೇ ಘಟಕದಲ್ಲೂ 16ಕ್ಕೂ ಹೆಚ್ಚು ಮಂದಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ವಿಚಾರಣೆ ನಡೆಯುವ ಮುನ್ನವೇ ಈಗ 6 ಕೋಟಿ ರೂ.ಗಳಿಗೂ ಹೆಚ್ಚಿನ ದಂಧೆ 28 ಮತ್ತು 7ನೇ ಘಟಕದಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.
ಹೆಬ್ಬಾಳದಲ್ಲಿರುವ ಬಿಎಂಟಿಸಿ 28ನೇ ಘಟಕ ಮತ್ತು ಕೆಂಪೇಗೌಡ ಬಸ್‌ನಿಲ್ದಾಣದಲ್ಲಿರುವ ಘಟಕ 7ರಲ್ಲೂ ಪ್ರುಮುಖವಾಗಿ ಅಧಿಕಾರಿಗಳು ಈ ಬಿಟ್ ಕಾಯಿನ್ ದಂಧೆಯಲ್ಲಿ ತೊಡಗಿರುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಡಿಪೋ ಮಟ್ಟದ ಅಧಿಕಾರಿಗಳು ತಾವು ತೊಡಗಿರುವುದೂ ಅಲ್ಲದೆ 67ಕ್ಕೂ ಹೆಚ್ಚು ನೌಕರರನ್ನು ಈ ದಂಧೆಗೆ ಸಿಲುಕಿಸಿದ್ದು, ಏನು ಅರಿಯದ ನೌಕರರು ಅಧಿಕಾರಿಗಳ ಮಾತು ಮೀರಲಾರದೆ ಲಕ್ಷ ಲಕ್ಷ ರೂಪಾಯಿಗಳನ್ನು ಹಾಕಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಬಿಟ್ ಕಾಯಿನ್ ಆಸೆ ಇಲ್ಲದಿದ್ದರೂ ನೌಕರರು ಡಿಪೋ ಮಟ್ಟದ ಅಧಿಕಾರಿಗಳು ನಮ್ಮ ಬಳಿ ಹಣವಿಲ್ಲ ಎಂದರೂ ನೌಕರರನ್ನು ನೀವು ಪಿಎಫ್ ನಿಧಿಯಿಂದ ಸಾಲ ಪಡೆದು ತೊಡಗಿಸಿ ನಿಮಗೆ ನೀವು ಹಾಕಿದ ಮೂರರಷ್ಟು ಹಣ ವಾಪಸ್ ಬರುತ್ತದೆ ಎಂದು ಆಸೆ ಹುಟ್ಟಿಸಿ ನೌಕರರ ಪಿಎಫ್ ಅಕೌಂಟ್‌ನಲ್ಲಿ ಸಾಲ ತೆಗೆಸಿಕೊಂಡು ಈ ದಂಧೆಯಲ್ಲಿ ತೊಡಗಿಸಿದ್ದಾರೆ ಎಂಬ ಆರೋಪವು ಇದೆ.
ಇದಿಷ್ಟೇ ಅಲ್ಲದೆ ಬ್ಯಾಂಕ್‌ಗಳಲ್ಲಿ ಲೋನ್, ಗೃಹ ಸಾಲ ಹೀಗೆ ವಿವಿಧ ರೂಪದ ಸಾಲಗಳನ್ನು ನೌಕರರಿಗೆ ಕೆಲ ಅಧಿಕಾರಿಗಳು ಕೊಡಿಸುವ ಮೂಲಕ ಈ ದಂಧೆಯಲ್ಲಿ ಹಣ ಹೂಡಲು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಬಿಎಂಟಿಸಿ ಜಾಗ್ರತೆ ಮತ್ತು ಭದ್ರತಾಧಿಕಾರಿಗಳಿಗೂ ಈ ಮಾಹಿತಿ ರವಾನೆಯಾಗಿದ್ದು, ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಶೋಧದಲ್ಲಿ ನಿರತರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ಬಿಎಂಟಿಸಿ ದಕ್ಷಿಣ ವಿಭಾಗದ 20ನೇ ಘಟಕದ ಕೆಲವು ಸಿಬ್ಬಂದಿಗಳು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದು, ಅಕೌಂಟ್‌ನಲ್ಲಿ ಲಕ್ಷಾಂತರ ಹಣವನ್ನು ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಂಸ್ಥೆಯ ಸಹಾಯಕ ಭದ್ರತಾಧಿಕಾರಿ ರಮ್ಯಾ ಅವರು ಕೃತ್ಯದಲ್ಲಿ ತೊಡಗಿದವರ ಹೆಡೆಮುರಿಕಟ್ಟಿದ್ದಾರೆ.
ಇನ್ನು ಈಗ ಯಾರದೋ ಮಾತುಕೇಳಿ ಸಾಲಸೋಲ ಮಾಡಿ ಲಕ್ಷಾಂತರ ರೂಪಾಯಿಯನ್ನು ತೊಡಗಿಸಿರುವ 28ನೇ ಘಟಕ ಮತ್ತು 7ನೇ ಘಟಕದ ನೌಕರರ ಸ್ಥಿತಿ ಹೇಳತೀರದಾಗಿದ್ದು, ನಾವು ಮೋಸ ಹೋಗಿದ್ದೇವೆ ಎಂದು ತಿಳಿದ ಕೆಲ ನೌಕರರು ಪೊಲೀಸ್ ಠಾಣೆಗೂ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ದೂರು ನೀಡಲು ಹೋದ ನೌಕರರನ್ನೇ ಹೆದರಿಸಿ ಬೆದರಿಸಿ ಕಳುಹಿಸಿದ್ದಾರೆ ಎಂಬ ಆರೋಪವು ಇದೆ.
ಅಕ್ರಮವಾಗಿ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ ಕೂಡಲೇ ಕಾರ್ಯಪ್ರವೃತ್ತರಾಗಬೇಕಾದ ಪೊಲೀಸರೆ ಈ ರೀತಿ ನಡೆದುಕೊಂಡರೆ ನಾವು ಮತ್ತ್ಯಾರನ್ನು ಕೇಳುವುದು ಎಂದ ತಮ್ಮ ನೋವನ್ನು ತಾವೇ ನುಂಗಿಕೊಂಡು ಹಲವು ನೌಕರರು ಸುಮ್ಮನಾಗಿದ್ದಾರೆ.
ಹೀಗಾಗಿ ಸಂಬಂಧಪಟ್ಟ ದಂಧೆಕೋರರನ್ನು ಪತ್ತೆಹಚ್ಚಿ ಬಿಎಂಟಿಸಿ ಜಾಗ್ರತೆ ಮತ್ತು ಭದ್ರತಾಧಿಕಾರಿಗಳು ಮೋಸ ಹೋಗಿರುವ ನೌಕರರಿಗೆ ಮರಳಿ ಹಣಕೊಡಿಸಬೇಕು. ಅಲ್ಲದೆ ಈ ದಂಧೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕಠಣ ಕ್ರಮತೆಗೆದುಕೊಂಡು ತಕ್ಕ ಶಿಕ್ಷೆಗೆ ಒಳಪಡಿಸಬೇಕು ಎಂದು ಹಣ ಕಳೆದುಕೊಂಡಿರುವ ನೌಕರರು ಮನವಿ ಮಾಡಿದ್ದಾರೆ.
ಇನ್ನು ಬಿಟ್ ಕಾಯಿನ್ ದಂಧೆಯಲ್ಲಿ ಬಿಎಂಟಿಸಿಯ ಸಾಮಾನ್ಯ ನೌಕರರು ಇಲ್ಲ. ಇವರ ಹಿಂದೆ ಅಧಿಕಾರಿಗಳು ಇದ್ದಾರೆ. ಆ ಅಧಿಕಾರಿಗಳೇ ಸಾಮಾನ್ಯ ನೌಕರರಿಗೆ ಈ ರೀತಿ ಆಸೆ ಹುಟ್ಟಿಸಿ ದಂಧೆಯಲ್ಲಿ ತೊಡಗಲು ತಾಕೀತು ಮಾಡಿದ್ದು ಅಧಿಕಾರಿಗಳ ಮಾತಿನಂತೆ 67ಕ್ಕೂ ಹೆಚ್ಚು ನೌಕರರು 6 ಕೋಟಿ ರೂ.ಗಳಿಗೂ ಮಿಕ್ಕಿ ಹಣ ತೊಡಗಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಿಗಮದ ಜಾಗ್ರತೆ ಮತ್ತು ಭದ್ರತಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ.