ಮೈಸೂರು: ಮಹಿಷ ದಸರಾ ಮತ್ತು ಚಾಮುಂಡಿ ಚಲೋ ಜಾಥಾ ಮಾಡದಂತೆ ನಗರ ಪೊಲೀಸ್ ಆಯುಕ್ತರು ತಿಳಿಸಿರುವ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಮೈಸೂರು ಜಿಲ್ಲಾಡಳಿತ ನಿರ್ಬಂಧ ಹೇರಿ 144 ಸೆಕ್ಷನ್ ಜಾರಿಗೊಳಿಸಿದೆ. ಹೀಗಾಗಿ ಚಾಮುಂಡಿಬೆಟ್ಟದ ಪಾದದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪೊಲೀಸ್ ಆಯುಕ್ತ ಡಾ.ರಮೇಶ್ ಪುರಭವನದಲ್ಲಿ ಮಹಿಷ ದಸರಾ ಆಚರಿಸಲು ಅನುಮತಿ ನೀಡಿದ್ದು, ಇದು ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ನೀಡಲಾಗಿದೆ. ಈ ಕಾರ್ಯಕ್ರಮದ ವೇಳೆ ಯಾವುದೇ ಪ್ರಚೋದನಕಾರಿ ಭಾಷಣ ಮಾಡಿದರೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಇನ್ನು ಈ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ದುರ್ಘಟನೆ ನಡೆಯಬಾರದು ಎಂಬ ದೃಷ್ಟಿಯಲ್ಲಿ ಸುಮಾರು 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸದ್ಯ ಎರಡೂ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಚಾಮುಂಡಿ ಕಾಲ್ಪನಿಕ, ಮಹಿಷ ಇತಿಹಾಸ ಪುರುಷ: ನಾವು ಜನಪದದಲ್ಲಿ ಬರುವ ಚಾಮುಂಡಿಯ ಪ್ರಸಂಗ ಹೇಳಿದ್ದೇವೆ. ಆದರೆ ನಾವು ಚಾಮುಂಡಿಯನ್ನು ನಿಂದಿಸಿಲ್ಲ. ನಮಗೆ ಮಹಿಷನ ಮೇಲೂ ಭಕ್ತಿ ಗೌರವವಿದೆ, ಚಾಮುಂಡಿ ಮೇಲೂ ಇದೆ. ನೀವು ಮಹಿಷನ ಹಿನ್ನೆಲೆ ಕೇಳಿದ್ರೆ, ನಾವು ಚಾಮುಂಡಿ ಹಿನ್ನೆಲೆ ಕೇಳ್ತಿವಿ. ಚಾಮುಂಡಿ ಕಾಲ್ಪನಿಕ, ಮಹಿಷ ಇತಿಹಾಸ ಪುರುಷ ಅನ್ನೋದು ಸತ್ಯ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದ್ದಾರೆ.
ಚಾಮುಂಡಿ ಕೀಳಾಗಿ ಮಾತಾಡಲ್ಲ: ಚಾಮುಂಡಿ ದೇವಿ ಬಗ್ಗೆ ನಮ್ಮಲೇ ಕೆಲವರು ಕೆಟ್ಟದಾಗಿ ಮಾತನಾಡಿದ್ದು ತಪ್ಪು. ಆ ತಪ್ಪು ಮುಂದೆ ಆಗುವುದಿಲ್ಲ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಭರವಸೆ ನೀಡಿದ್ದಾರೆ.
ಮಹಿಷ ದಸರಾಕ್ಕೆ ಬ್ರೇಕ್ ಬಿದ್ದಿದ್ದು ಸಮಾಧಾನ: ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸುವುದು ನಿಲ್ಲಿಸೋದೇ ನಮ್ಮ ಉದ್ದೇಶವಾಗಿತ್ತು. ಆ ಕೆಲಸದಲ್ಲಿ ನಮಗೆ ಜಯ ಸಿಕ್ಕಿದೆ. ಮಹಿಷ ದಸರಾ ತಡೆಯಲು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದೇವು. ಈಗ ಅದಕ್ಕೆ ಬ್ರೇಕ್ ಬಿದ್ದಿದೆ. ಇದು ನಮಗೆ ಸಮಾಧಾನ ತಂದಿದೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.