ಕುಷ್ಟಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರ ತಪ್ಪಿ ಉರುಳಿ ಬಿದ್ದ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ 11 ಮಂದಿ ತೀವ್ರಗಾಯಗೊಂಡಿರುವ ಘಟನೆ ತಾಲೂಕಿನ ಮಿಯಾಪುರ ಬಳಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದ ಬಳಿ ಮಂಗಳೂರು ಘಟಕದ ಬಸ್ ಈ ಅವಘಡಕ್ಕೆ ಸಿಲುಕಿದೆ. ಕುಷ್ಟಗಿ ತಾಲೂಕು ದೋಟಿಹಾಳದಿಂದ ಗಜೇಂದ್ರಗಡ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಈ ವೇಳೆ ಚಾಲಕ, ನಿರ್ವಾಹಕ, ಮಕ್ಕಳು, ವೃದ್ಧ ಮಹಿಳೆಯರು ಸೇರಿ ಒಟ್ಟು 11 ಜನರಿಗೆ ಒಳಪೆಟ್ಟು ಮತ್ತು ಕೈಕಾಲು ತಲೆ, ಸೊಂಟ ಮತ್ತಿತರೆ ಕಡೆ ಗಾಯಗಳಾಗಿವೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಸ್‌ದಲ್ಲಿ 28 ಜನ ಪ್ರಯಾಣಿಕರು ಇದ್ದು ಅವರೆಲ್ಲ ಕೂಲಿಕಾರ್ಮಿಕರಾಗಿದ್ದು, ಉದ್ಯೋಗ ಅರಸಿ ಮಂಗಳೂರು, ಗೋವಾಕ್ಕೆ ತೆರಳುತ್ತಿದ್ದರು. ಶಾಲೆಗಳಿಗೆ ದಸರಾ ರಜೆ ಇರುವುದರಿಂದ ಅವರೊಂದಿಗೆ ಕೆಲ ಮಕ್ಕಳೂ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಿಯಾಪುರ ಗ್ರಾಮದ ಸೀಮಾಂತರದ ರಸ್ತೆ ತಿರುವಿನಲ್ಲಿ ಹಳ್ಳಕ್ಕೆ ಸೇತುವೆ ಇದ್ದು ಅದರ ಅಕ್ಕಪಕ್ಕದಲ್ಲಿ ತಡೆಗೋಡೆ ಅಥವಾ ಕಂಬಗಳು ಇಲ್ಲ. ಕೊರಕಲುಗಳಿವೆ. ರಕ್ಷಣಾ ಗೋಡೆಗಳನ್ನು ನಿರ್ಮಿಸಿದ್ದರೆ ಬಸ್ ಬೀಳುತ್ತಿರಲಿಲ್ಲ. ಮುಳ್ಳುಕಂಟಿಗಳು ಬೆಳೆದಿರುವುದರಿಂದ ವೇಗದಲ್ಲಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.
ರಸ್ತೆ ಉತ್ತಮವಾಗಿದ್ದರೂ ಸೇತುವೆ ಹದಗೆಟ್ಟಿದೆ. ದುರಸ್ತಿ ಇಲ್ಲದ ಕಾರಣ ಬಸ್ ಅಪಘಾತಕ್ಕೀಡಾಗಿದೆ. ದುರಸ್ತಿಗೊಳಿಸುವಂತೆ ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಮಿಯಾಪುರ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಯಶವಂತ ಬಿಸನಳ್ಳಿ, ಕುಷ್ಟಗಿ ಸಾರಿಗೆ ಘಟಕ ವ್ಯವಸ್ಥಾಪಕ ಸುಂದರಗೌಡ ಪಾಟೀಲ, ಸಬ್ ಇನ್‌ಸ್ಪೆಕ್ಟರ್‌ಗಳಾದ ಮುದ್ದುರಂಗಸ್ವಾಮಿ, ವಿರೂಪಾಕ್ಷಪ್ಪ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.