ನ್ಯೂಡೆಲ್ಲಿ: ಫೋನ್ ಕರೆ ಮಾಡಿದ ವೇಳೆ ಸಂಬಂಧಿತ ವ್ಯಕ್ತಿಯ ಅನುಮತಿ ಇಯಿಲ್ಲದೆ, ಸಂಭಾಷಣೆ ರೆಕಾರ್ಡ್ ಮಾಡುವುದು ಸಂವಿಧಾನ ಪರಿಚ್ಛೇದ 21ರ ಅಡಿಯಲ್ಲಿ ಖಾಸಗಿತನ ಹಕ್ಕಿನ ಉಲ್ಲಂಘನೆಯಾದಂತೆ ಎಂದು ಛತ್ತೀಸ್‌ಗಡ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣ ಒಂದರ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಅವರಿದ್ದ ಪೀಠವು 2021ರ ಅಕ್ಟೋಬರ್ 21ರಂದು ಮಹಾಸಮುಂಡ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸುವ ಸಂದರ್ಭದಲ್ಲಿ ಈ ಆದೇಶ ನೀಡಿದೆ.
ವಿವರ: ಛತ್ತೀಸ್‌ಗಡ ಹೈಕೋರ್ಟ್‌ನಲ್ಲಿ ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ. ಕೌಟುಂಬಿಕ ನ್ಯಾಯಾಲಯವು ಪತಿ- ಪತ್ನಿ ಜತೆಗಿನ ಸಂಭಾಷಣೆಯ ರೆಕಾರ್ಡ್ ಅನ್ನು ಸಾಕ್ಷ್ಯವಾಗಿ ಹಾಜರುಪಡಿಸಲು ಅನುಮತಿ ನೀಡಿತ್ತು. ಪತ್ನಿ ತನ್ನ ಪತಿಯಿಂದ ಜೀವನಾಂಶ ಭತ್ಯೆಗಾಗಿ 2019ರಲ್ಲಿ ಮಹಾಸಮುಂಡ್‌ನ ಕಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಪುರಾವೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.
ಪತ್ನಿ ಮೇಲಿನ ಅನುಮಾನದಿಂದ ಪತಿ ಜೀವನಾಂಶ ನೀಡಲು ನಿರಾಕರಿಸಿದ್ದರು. ಅದಕ್ಕೆ ಕಾರಣ ನೀಡಲು ಅರ್ಜಿದಾರರ ಸಂಭಾಷಣೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಆ ರೇಕಾರ್ಡ್ ಆಧಾರದ ಮೇಲೆ ಪತ್ನಿಯನ್ನು ನ್ಯಾಯಾಲಯದ ಮುಂದೆ ಕ್ರಾಸ್ ಎಕ್ಸಾಮಿನ್ ಮಾಡಬೇಕು ಎಂದು ಪತಿ ಅರ್ಜಿ ಸಲ್ಲಿಸಿದ್ದರು. ಪತಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ಕೌಟುಂಬಿಕ ನ್ಯಾಯಾಲಯ ವಿಚಾರಣೆಗೆ ಅನುಮತಿ ನೀಡಿತ್ತು.
ಹೈಕೋರ್ಟ್ ಮೊರೆ ಹೋದ ಮಹಿಳೆ: ಕೌಟುಂಬಿಕ ನ್ಯಾಯಾಲಯದ ಆದೇಶದ ನಂತರ ಮಹಿಳೆಯು 2021ರ ಅಕ್ಟೋಬರ್ 21ರಂದು ಹೈಕೋರ್ಟ್ ಮೊರೆ ಹೋಗಿದ್ದರು. ದೂರವಾಣಿ ರೆಕಾರ್ಡಿಂಗ್ ಅನ್ನು ಸಾಕ್ಷ್ಯವಾಗಿ ಪ್ರಸ್ತುತಪಡಿಸುವ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.
ಅಲ್ಲದೆ ಇದು ತನ್ನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಮಹಿಳೆ ಪ್ರತಿಪಾದಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಸಂಭಾಷಣೆಯ ಲೆಕಾರ್ಡಿಂಗ್ ಮಂಡನೆಗೆ ಅವಕಾಶ ನೀಡುವ ಮೂಲಕ ಕಾನೂನು ದೋಷ ಎಸಗಿದೆ. ಸಂಭಾಷಣೆಯನ್ನು ಅರ್ಜಿದಾರರಿಗೆ ತಿಳಿಯದೆ ಪ್ರತಿವಾದಿಯು ರೆಕಾರ್ಡ್ ಮಾಡಿದ್ದಾರೆ. ಆದ್ದರಿಂದ ಅದನ್ನು ಅವರ ವಿರುದ್ಧ ಬಳಸಲಾಗುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಈ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಫೋನ್ ಕರೆ ಸಂಭಾಷಣೆ ರೆಕಾರ್ಡ್ ಮಾಡುವುದು ಸಂವಿಧಾನ ಪರಿಚ್ಛೇದ 21ರ ಅಡಿಯಲ್ಲಿ ಖಾಸಗಿತನ ಹಕ್ಕಿನ ಉಲ್ಲಂಘನೆಯಾದಂತೆ ಎಂದು ಹೇಳಿ ಜೀವನಾಂಶ ಕೊಡಬೇಕು ಎಂಬುದನ್ನು ಎತ್ತಿಹಿಡಿದ್ದು ಮಹಾಸಮುಂಡ್‌ನ ಕಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ವಜಾಗೊಳಿಸಿದೆ.