ಬೆಂಗಳೂರು: ಕೋರಮಂಗಲದ 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಕಟ್ಟಡದ ಟೆರಿಸ್‌ನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಇತ್ತೀಚೆಗೆ ಆನೇಕಲ್ ಪಟಾಕಿ ಗೋಡಾನ್ಗೆ ಬೆಂಕಿ ಬಿದ್ದು 11 ಜನರು ಸಾವನ್ನಪ್ಪಿದ್ದರು. ಆದರೆ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಬೆಂಗಳೂರಿಗರಲ್ಲಿ ಆತಂಕ ಹೆಚ್ಚಿಸಿದೆ.
ಕೋರಮಂಗಲದ ವುಡ್ ಪೈಪ್ ಕಟ್ಟಡದಲ್ಲಿರುವ ಪಬ್ವೊಂದರಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಕಟ್ಟಡ ಸಂಪೂರ್ಣ ಭಸ್ಮವಾಗಿದ್ದು, ಅಲ್ಲೇ ಸಿಲುಕಿದ್ದ ವ್ಯಕ್ತಿಒಬ್ಬ ಕಟ್ಟಡದಿಂದ ಜಿಗಿದ ದೃಶ್ಯ ವೈರಲ್ ಆಗುತ್ತಿದೆ.
ಸಿಲಿಂಡರ್ ಬ್ಲಾಸ್ಟ್ನಿಂದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಿಲ್ಡಿಂಗ್‌ನ ಮೇಲೆ ಇರುವ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡವಾದ ಬಳಿಕ 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು, ಬೆಂಕಿ ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಪಬ್ನ ಅಡುಗೆ ಕೋಣೆಯಲ್ಲಿ ಗ್ಯಾಸ್ ಸ್ಫೋಟಗೊಂಡು ಬೆಂಕಿ ಹಬ್ಬಿದೆ. ಪರಿಣಾಮ ಕಟ್ಟಡಕ್ಕೆ ಸಂಪೂರ್ಣ ಆವರಿಸಿದೆ. ಕಟ್ಟಡದ ಬಳಿ ಕಾರು ಶೋ ರೂಂ ಕೂಡ ಇದ್ದು, ಅಲ್ಲಿದ್ದ ಬಿಳಿಯ ಬಣ್ಣದ ಹೊಸ ಕಾರೊಂದು ಸಂಪೂರ್ಣ ಭಸ್ಮವಾಗಿದೆ.
ಜೀವ ಉಳಿಸಲು ಕಟ್ಟಡದಿಂದ ಜಿಗಿದ: ಬೆಂಕಿಯಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ವುಡ್ ಪೈಪ್ ಕಟ್ಟಡದಿಂದ ಜಿಗಿದಿದ್ದಾನೆ. ಈ ವೇಳೆ ಕೆಳಭಾಗದಲ್ಲಿದ್ದ ಮರದ ಮೇಲೆ ಆತ ಬಿದ್ದಿದ್ದು, ಸ್ಥೀತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಗೊಂಡಿರುವ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ರವಾನಿಸಲಾಗಿದೆ.
ಇನ್ನು ವಿಷಯ ತಿಳಿದ ಕೂಡಲೇ ಅಗ್ನಿ ಶಾಮಕ ದಳ ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಹರಸಾಹ ಮಾಡುತ್ತಿದ್ದಾರೆ. ಜತೆಗೆ ಹತ್ತಿರದ ಕಟ್ಟಡಕ್ಕೆ ಬೆಂಕಿ ತಗುಲದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.