ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ-2025ಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ವಿಚಾರಣಾ ಆಯೋಗ ರಚಿಸಿ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಪ.ಜಾತಿ ಒಳಮೀಸಲಾತಿ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದು ಮೇ 5 -17ರವರೆಗೂ ರಾಜ್ಯದಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಇಂದು ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಮೀಕ್ಷೆ ಕಾರ್ಯಕ್ಕೆ ಪ್ರತಿ ಮತಗಟ್ಟೆಗೆ ಒಬ್ಬರಂತೆ ಗಣತಿದಾರರು, ಪ್ರತಿ 10 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಇನ್ನು ಮೇ 5 ರಿಂದ 17 ರವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಮೇ 19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಯಲಿದೆ. ಗಣತಿದಾರರು ಮನೆ ಮನೆ ಭೇಟಿ ನೀಡಿದ ಸಂಧರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್, ಪರಿತರ ಚೀಟಿ, ಮೊಬೈಲ್ ನಂಬರ್, ನೀಡಿ ಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ರಾಜ್ಯ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ:9482300400 ಹಾಗೂ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್, ಅವರ ವಿಚಾರಣಾ ಆಯೋಗ ಸಹಾಯವಾಣಿ :9481359000 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆ ಸಚಿವರಾದ ಎಸ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವರು ಇದ್ದರು.
Related
