ತಿ.ನರಸೀಪುರ: ತಾಲೂಕು ಆಡಳಿತದ ವೈಫಲ್ಯದಿಂದಾಗಿ ತಾಲೂಕಿನಾದ್ಯಂತ ಲಾಕ್ ಡೌನ್ ವಿಫಲವಾಗುತ್ತಿದ್ದು ಸಾರ್ವಜನಿಕರು ಎಂದಿನಂತೆ ರಸ್ತೆಗಳಲ್ಲಿ ಓಡಾಡುವ ಮೂಲಕ ಆತಂಕ ತಂದಿಟ್ಟಿದ್ದಾರೆ.
ಕೊರೊನಾ ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಗೆ ಆದೇಶ ನೀಡಿದ್ದರೂ ತಾಲೂಕಿನಲ್ಲಿ ಮಾತ್ರ ಸಾರ್ವಜನಿಕರು ಸರ್ಕಾರದ ಆದೇಶ ಮಾಡದೇ ಉದ್ದಟತನ ತೋರುತ್ತಿದ್ದಾರೆ. ಸಾರ್ವಜನಿಕರು ಎಂದಿನಂತೆಯೇ ರಸ್ತೆಗಿಳಿದು ಓಡಾಡುತ್ತಿದ್ದಾರೆ. ಪೊಲೀಸರು ಪ್ರತಿ ನಿತ್ಯ ಧ್ವನಿ ವರ್ಧಕದ ಮೂಲಕ ಹೊರ ಬಾರದಂತೆ ಸೂಚನೆ ನೀಡುತ್ತಿದ್ದರೂ ಜನರು ಕೇಳದೆ ಬೀದಿಗೆ ಬಂದು ಓಡಾಡುತ್ತಿದ್ದಾರೆ. ಕೆಲವೆಡೆ ಪೊಲೀಸರು ಲಾಠಿ ರುಚಿ ತೋರಿಸಿದರೂ ಅದಕ್ಕೂ ಹೆದರದೇ ಮತ್ತದೇ ಕೆಲಸ ಮಾಡಲು ಮುಂದಾಗಿರುವುದು ಮಾತ್ರ ಜನರಲ್ಲಿನ ಅವಿವೇಕತನವನ್ನು ತೋರಿಸುತ್ತಿದೆ.
ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಲ್ಲ ?
ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗಿರುವ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೇ ಬೇಜವಾಬ್ದಾರಿತನ ತೋರುತ್ತಿದ್ದಾರೆಂಬ ಆರೋಪ ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೊರೊನಾ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾದರೂ ಟಾಸ್ಕ್ ಫೋರ್ಸ್‌ನ ತಂಡದಲ್ಲಿರುವ ಯಾವೊಬ್ಬ ಪಿಡಿಒ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಾಗಲಿ ಒಂದೇ ಒಂದು ಹಳ್ಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿರುವ ದಾಖಲೆ ಇಲ್ಲ.
ತಹಸೀಲ್ದಾರ್ ಮೃದು ಧೋರಣೆ ಅಧಿಕಾರಿಗಳಿಗೆ ವರದಾನ
ತಹಸೀಲ್ದಾರ್ ಡಿ.ನಾಗೇಶ್ ಅವರೇನೋ ಕಾರ್ಯ ಪ್ರವೃತ್ತರಾಗಿ ಕೆಲಸ ಮಾಡುವಂತೆ ಟಾಸ್ಕ್ ಪೋರ್ಸ್ ತಂಡಕ್ಕೆ ಸೂಚನೆ ನೀಡಿದ್ದಾರೆ. ಆದರೆ ತಾಲ್ಲೂಕಿನ ಅಧಿಕಾರಿಗಳಾಗಿ ಟಾಸ್ಕ್ ಫೋರ್ಸ್‌ನ ಸದಸ್ಯರಾಗಲೀ ತಹಸೀಲ್ದಾರ್ ರ ಆದೇಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಇದನ್ನು ಸ್ವತಃ ಅವರೇ ವೃತ್ತ ನಿರೀಕ್ಷಕರ ಮುಂದೆ ಹೇಳಿಕೊಂಡಿದ್ದಾರೆ. ಈ ರೀತಿ ಅಸಹಾಯಕ ಪರಿಸ್ಥಿತಿ ತಹಸೀಲ್ದಾರ್ ರವರದಾದರೇ ಕಷ್ಟ ಎಂದು ಸಿಪಿಐ ಲವ ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಚುರುಕಿನ ಕಾರ್ಯಚರಣೆಗೆ ಮುಂದಾಗಿಲ್ಲ
ಲಾಕ್ ಡೌನ್ ಆದೇಶ ಹೊರ ಬಿದ್ದ ನಂತರ ಬೆಂಗಳೂರಿನಿಂದ ತಾಲೂಕಿಗೆ ಸಾವಿರಾರು ಮಂದಿ ಆಗಮಿಸಿದ್ದು ಇವರೆಲ್ಲರ ಪಟ್ಟಿ ತಯಾರಿಸಿ ಅಗತ್ಯ ಕ್ರಮ ಕೈಗೊಳ್ಳುವ ಗೋಜಿಗೆ ಆರೋಗ್ಯ ಇಲಾಖೆ ಹೋಗಿಲ್ಲದಿರುವುದು ಸಹ ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಬೆಂಗಳೂರಿನಿಂದ ತಾಲೂಕಿನ ಪ್ರತಿ ಹಳ್ಳಿಗೂ ಕನಿಷ್ಠ 150 ಮಂದಿ ಆಗಮಿಸಿದ್ದು ಅಗತ್ಯವಾಗಿ ಅವರೆಲ್ಲರ ತಪಾಸಣೆ ಮಾಡಿ ಕ್ವಾರಂಟೈನ್ ನಲ್ಲಿ ಇಡಬೇಕಾದ ಆರೋಗ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಆತಂಕಕ್ಕೆಡೆ ಮಾಡಿದೆ. ಒಟ್ಟಾರೆ ಕೊರೊನಾ ತಡೆಗಟ್ಟಲು ದೇಶಾದ್ಯಂತ ಹೆಣಗಾಟ ನಡೆಯುತ್ತಿದೆಯಾದರೂ ತಾಲೂಕು ಆಡಳಿತ, ಅದರಲ್ಲೂ ಕಂದಾಯ ಇಲಾಖೆ ಬೇಜವಾಬ್ದಾರಿ ನಡೆ ಪ್ರದರ್ಶಿಸುವ ಮೂಲಕ ಚುರುಕಿನ ಕಾರ್ಯಚರಣೆಗೆ ಮುಂದಾಗದಿರುವುದು ಮಾತ್ರ ವಿಪರ್ಯಾಸ.