ಇಪಿಎಸ್ ಪಿಂಚಣಿದಾರರ 38ನೇ ಬೃಹತ್ ಪ್ರತಿಭಟನೆ: ಇಳಿವಯಸ್ಸಿನ ಜೀವಗಳ ಹಿಂಡುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ. ಕೂಡಲೇ ನೀಡಬೇಕೆಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಇಪಿಎಸ್ ಪಿಂಚಣಿದಾರರ 38ನೇ ಬೃಹತ್ ಪ್ರತಿಭಟನೆ ಜರುಗಿತು.

ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ವತಿಯಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ಪ್ರತಿಭಟನಾ ನಿರತರು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಕಚೇರಿ ಆವರಣದಲ್ಲಿ ಹರತಾಳ ನಡೆಸಿ, ಧಿಕ್ಕಾರದ ಘೋಷಣೆ ಕೂಗುತ್ತಿದ್ದದ್ದು ಮುಗಿಲು ಮುಟ್ಟಿತು. ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳನ್ನು ತೀವ್ರ ತಾರಾಟೆಗೆ ತೆಗೆದುಕೊಂಡರು. ಇದುವರೆಗೂ ನಾವು ಪ್ರತಿಭಟನೆ ಮೂಲಕ 37 ಮನವಿ ಪತ್ರಗಳನ್ನು ಕೇಂದ್ರ ಸರ್ಕಾರದ ಸಚಿವರಿಗೆ ನೀಡಿದ್ದು, ಯಾವುದೇ ಮನವಿ ಪತ್ರಕ್ಕೂ ಕೂಡ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇನ್ನು ಮಾ.2ರಂದು ಸಿಬಿಟಿ ಸಭೆ ದೆಹಲಿಯಲ್ಲಿ ನಡೆಯಲಿದ್ದು, ಇದಾದ ನಂತರ ಮಾ.9ರಿಂದ ಎರಡನೇ ಹಂತದ ಪಾರ್ಲಿಮೆಂಟ್ ಅಧಿವೇಶನ ನಡೆಯಲಿದ್ದು, ಇವೆರಡು ಮುಕ್ತಾಯವಾಗುವ ಮುನ್ನ ಇಪಿಎಸ್ ನಿವೃತ್ತರ ಮೂಲಭೂತ ಬೇಡಿಕೆ 7,500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡಬೇಕೆಂದು, ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಏಪ್ರಿಲ್ 2ರ ನಂತರ ನಮ್ಮ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ.
ಮದುರೈ ಉಚ್ಚ ನ್ಯಾಯಾಲಯವು 2/09/2025 ರಂದು, ಕೊಲ್ಕತ್ತಾ ಉಚ್ಚ ನ್ಯಾಯಾಲಯವು 14.11.2025 ರಂದು, ಇಪಿಎಸ್ ನಿವೃತ್ತರ ಪರ ನೀಡಿರುವ ಆದೇಶ ನಮಗೂ ಅನ್ವಯವಾಗಲಿದ್ದು, ಈ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಿ, ಅಧಿಕ ಹೆಚ್ಚುವರಿ ಪಿಂಚಣಿ ನೀಡಬೇಕು ಎಂಬ ಆಗ್ರಹವನ್ನು ಮಾಡಿದ್ದಾರೆ.
ಜೇಮ್ ಷೇಡ್ಪುರದಲ್ಲಿರುವ M/s ಟಾಟಾ ಸ್ಟೀಲ್ ಪ್ರವೇಟ್ ಲಿಮಿಟೆಡ್ ಕಂಪನಿಯ ಇಪಿಎಸ್ ನಿವೃತ್ತರಿಗೆ ಅದರ ಟ್ರಸ್ಟ್ ರೂಲ್ಸ್ ಅನ್ವಯ ಅಧಿಕ ಪಿಂಚಣಿ ನೀಡಲು ಜಂಮ್ ಷೇಡ್ ಪುರ ಇಪಿಎಫ್ಒ ಅಧಿಕಾರಿಗಳು ಸುತ್ತೋಲೆ ದಿನಾಂಕ 11/09/2025 ರಂದು ಹೊರಡಿಸಿದ್ದು, ಈ ನಿಯಮವನ್ನು ನಮ್ಮ 4 ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೂ ಸಹಾ ವಿಸ್ತರಿಸಬೇಕು. 10.10.2025 ರಂದು ವ್ಯವಸ್ಥಾಪಕ ನಿರ್ದೇಶಕರು ಕೆಎಸ್ಆರ್‌ಟಿಸಿ ಅವರು ಇಪಿಎಸ್ ನಿವೃತ್ತರ ಪರ ಉಲ್ಲೇಖಿಸಿರುವ ಪತ್ರಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಂಡು ಎಲ್ಲ ಜಂಟಿ ಆಯ್ಕೆ ಪತ್ರಗಳನ್ನು ಟ್ರಸ್ಟ್ ನಿಯಮಾವಳಿಗನ್ವಯ ಪುನರ್ ಸ್ಥಾಪಿಸಿ, ಎಲ್ಲ ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್, ಅಧ್ಯಕ್ಷ ನಂಜುಂಡೇಗೌಡ, ಕಾರ್ಯಾಧ್ಯಕ್ಷ ಶಂಕರ ಕುಮಾರ್, ಕೆಎಸ್ಆರ್‌ಟಿಸಿ ಚಿಕ್ಕಬಳ್ಳಾಪುರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಚಂದ್ರೇಗೌಡ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ನಾಗರಾಜು ಹಾಗೂ ಕೃಷ್ಣಮೂರ್ತಿ ಸೇರಿದಂತೆ ನೂರಾರು ಮಂದಿ ನಿವೃತ್ತ ನೌಕರರು ಭಾಗವಹಿಸಿದ್ದರು.
ಅಂತಿಮವಾಗಿ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆಯವರಿಗೆ ಉಲ್ಲೇಖಿಸಿದ್ದ ಮನವಿ ಪತ್ರವನ್ನು ಇಪಿಎಫ್ಒ ಅಧಿಕಾರಿಗಳು ಸ್ವೀಕರಿಸಿ ಮಾತನಾಡುತ್ತಾ, ಈ ಪ್ರತಿಭಟನೆಯ ಸಂಪೂರ್ಣ ವಿವರವನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ದೆಹಲಿಯಲ್ಲಿನ ತಮ್ಮ ಮೇಲಧಿಕಾರಿಗಳಿಗೂ ಕಳಿಸಿ ಕೊಡುವುದಾಗಿ ತಿಳಿಸಿದರು.
Related










The lack of response from the government, despite multiple petitions and protests, is truly disappointing. These pensioners deserve better, and the implementation of the Supreme Court’s ruling should not be delayed any longer.