ಟ್ರ್ಯಾಕ್ಟರ್‌ನಲ್ಲಿಟ್ಟಿದ್ದ ರೋಟಿ ಕಡ್ಡಿಗೆ KSRTC ಬಸ್ ಗುದ್ದಿದ ಆರೋಪ – ಚಾಲಕನ ಮೇಲೆ ಹಲ್ಲೆ : 13 ಜನರ ವಿರುದ್ಧ ಜಾಮೀನು ರಹಿತ ಕೇಸ್
ತುಮಕೂರು: ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮೇಲಿದ್ದ ರೋಟಿ ಕಡ್ಡಿಗೆ ಬಸ್ ಗುದ್ದಿಕೊಂಡು ಬಂದಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕನ ಮೇಲೆ ಹಲ್ಲೆ ಮಾಡಿದ 13 ಮಂದಿಯ ವಿರುದ್ದ ಎಫ್‌ಐಆರ್ ದಾಖಲಾಗಿರುವ ಘಟನೆ ತುರುವೇಕೆರೆಯಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ತುರುವೇಕೆರೆ ಘಟಕದ ಚಾಲಕ ಶಿವಶಂಕರ್ ಹಲ್ಲೆಗೊಳಾದವರಾಗಿದ್ದು, ತುರುವೇಕೆರೆ ತಾಲೂಕಿನ ಕೊಟ್ಟೂರನಕೊಟ್ಟಿಗೆ ನಿವಾಸಿಗಳಾದ ಮನೋಜ್ (27), ದೇವರಾಜು (55) ಎಂಬುವರು ಸೇರಿದಂತೆ 13 ಮಂದಿ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಇದೇ ಅ.25ರಂದು ತುರುವೇಕೆರೆ ಘಟಕದ ಬಸ್ ಕೆಎ-42ಎಫ್2068 ತುರುವೇಕೆರೆ – ತುಮಕೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ತುಮಕೂರು-ಗುಬ್ಬಿ- ನಿಟ್ಟೂರು- ಸಂಪಿಗೆ ಮಾರ್ಗವಾಗಿ ತುರುವೇಕೆರೆಗೆ ಬರುತ್ತಿದ್ದಾಗ ತಾವರೇಕೆರೆ ಗ್ರಾಮದ ಬಳಿ ಟ್ರ್ಯಾಕ್ಟರ್ ಮೇಲೆ ಇಟ್ಟಿದ್ದ ರೋಟಿ ಕಡ್ಡಿಗೆ ಬಸ್ ತಗುಲಿಸಿಕೊಂಡು ಚಾಲಕ ಬಂದಿದ್ದಾನೆ ಎಂದು ಕೊಟ್ಟೂರನಕೊಟ್ಟಿಗೆಯ 15 ಮಂದಿ ತುರುವೇಕೆರೆ ಘುಟಕದ ಬಳಿ ಬುಧವಾರ ಸಂಜೆ 6.45ಕ್ಕೆ ಬಂದು ಗಲಾಟೆ ಮಾಡಿದ್ದಾರೆ.
ಈ ವೇಳೆ ಘಟಕ ವ್ಯವಸ್ಥಾಪಕ ಮೂರ್ತಿ ಅವರು ಆ ಬಸ್ ಚಾಲಕ ಶಿವಶಂಕರ್ ಅವರನ್ನು ಕರೆದು ವಿಚಾರಿಸುತ್ತಿದ್ದಾಗ ಮನೋಜ್ ಮತ್ತು ದೇವರಾಜ್ ಏಕಾಏಕಿ ಅವಾಚ್ಯ ಪದಗಳಿಂದ ಚಾಲಕನನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವರ ಜತೆಗೆ ಬಂದಿದ್ದ ಇತರ 13 ಮಂದಿಯೂ ಕೂಡ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಶಿವಶಂಕರ್ ವಿವರಿಸಿದ್ದಾರೆ.
ಇನ್ನು ಮನೋಜ್ ಮತ್ತು ದೇವರಾಜು ಎಂಬುವರು ನನ್ನ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಸಮವಸ್ತ್ರವನ್ನು ಹರಿದು ಹಾಕಿದ್ದಾರೆ. ಆರೋಪಿಗಳು ಹಲ್ಲೆ ಮಾಡಿದ್ದರಿಂದ ನನ್ನ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾವರೇಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಕೊಟ್ಟೂರನಕೊಟ್ಟಿಗೆಯ 15 ಮಂದಿ ಡಿಪೋ ಬಳಿ ಬಂದು ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಘಟಕ ವ್ಯವಸ್ಥಾಪಕರು ಖಂಡಿಸಿದ್ದಾರೆ. ಅಲ್ಲದೆ ಒಬ್ಬ ನೌಕರನ ಮೇಲೆ ಅದು ಡ್ಯೂಟಿಯಲ್ಲಿ ಇದ್ದಾಗ ಹಲ್ಲೆ ಮಾಡಿದ್ದು, ಈ ಹಲ್ಲೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಘಟಕ ಸಿಬ್ಬಂದಿಗಳಿಂದಲೂ ಖಂಡನೆ: ಡಿಪೋಬಳಿ 15 ಮಂದಿ ಬಂದು ಗಲಾಟೆ ಮಾಡಿರುವುದನ್ನು ಘಟಕದ ಸಿಬ್ಬಂದಿಗಳು ಖಂಡಿಸಿದ್ದು, ಈ ಬಗ್ಗೆ ಆರಕ್ಕೂ ಹೆಚ್ಚು ನೌಕರರು ಸಾಕ್ಷಿ ಹೇಳುವುದಕ್ಕೆ ಮುಂದಾಗಿದ್ದಾರೆ. ಅಲ್ಲದೆ ಸಾರಿಗೆ ಬಸ್ ಚಾಲನಾ ಸಿಬ್ಬಂದಿಗಳ ಮೇಲೆ ಇತ್ತೀಚೆಗೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜತೆಗೆ ಹಲ್ಲೆ ಮಾಡಿದವರಿಗೆ ತಕ್ಕ ಶಿಕ್ಷೆ ವಿಧಿಸುವ ಮೂಲಕ ಸರಿಯಾದ ಕಾನೂನು ಪಾಠ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಲ್ಲೆ ಆರೋಪದಡಿ ಕೊಟ್ಟೂರನಕೊಟ್ಟಿಗೆಯ ನಿವಾಸಿಗಳಾದ ಮನೋಜ್, ದೇವರಾಜು ಸೇರಿ 13 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 1860, 427, 504, 143, 149, 448, 332ರಡಿ ಜಾಮೀನು ರಹಿತ (Non-bailable) ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.