ನ್ಯೂಡೆಲ್ಲಿ: ಕೇಂದ್ರ ಸರ್ಕಾರ ಯಾಕೋ ಜನಸಾಮಾನ್ಯರನ್ನು ಸರ್ವನಾಶ ಮಾಡಲು ಹೊರಟಂತೆ ಕಾಣುತ್ತಿದೆ. ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದೆ. ಇದನ್ನು ನೋಡಿದರೆ ಸರ್ಕಾರ ಎತ್ತ ಸಾಗುತ್ತಿದೆ ಎಂಬುವುದೆ ಅರ್ಥವಾಗದಂತಾಗಿದೆ.
ಹೌದು! ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದು, ಈ ಬೆಲೆ ಏರಿಕೆಯ ಭೂತದ ಬಿಸಿ ಸದ್ಯಕ್ಕೆ ವಾಣಿಜ್ಯ ವಹಿವಾಟು ನಡೆಸುವ ಜನರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯಾಗುತ್ತಿದ್ದು ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಗೂ ಬ್ರೇಕ್ ಬೀಳುತ್ತಿಲ್ಲ. ಇಂದೂ ಕೂಡ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂ. ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1914.50 ರೂಪಾಯಿ ತಲುಪಿದೆ.
ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 1ರ ಬುಧವಾರದಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಹೆಚ್ಚಳ ಮಾಡಿವೆ. ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರಿನ ಬೆಲೆಯಲ್ಲಿ ಎರಡು ಬಾರಿ ಏರಿಕೆ ಮಾಡಿದಂತಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 100 ರೂ. ದುಬಾರಿಯಾಗಿದ್ದರೆ, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇದು ಗೃಹಿಣಿಯರಿಗೆ ಸ್ವಲ್ಪ ಸಮಾಧಾನಕರ ವಿಷಯವಾಗಿದೆ. ಇತ್ತೀಚಿನ ದರ ಪರಿಷ್ಕರಣೆಯೊಂದಿಗೆ 19 ಕೆಜಿ ತೂಕದ ವ್ಯಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,731 ರೂ.ನಿಂದ 1,833 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 1,785.50 ರೂ., ಕೋಲ್ಕತದಲ್ಲಿ 1,943 ರೂ., ಚೆನ್ನೈನಲ್ಲಿ 1,999.50 ರೂ. ತಲುಪಿದೆ.
ಅಕ್ಟೋಬರ್ 1ರಂದು ತೈಲ ಕಂಪನಿಗಳು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರದಲ್ಲಿ 209 ರೂ.ಗಳಷ್ಟು ಏರಿಕೆ ಮಾಡಿತ್ತು. ಕಳೆದ ತಿಂಗಳು 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಮುಂಬೈನಲ್ಲಿ 1,684 ರೂ., ಕೋಲ್ಕತ್ತಾದಲ್ಲಿ 1,839.50 ರೂ. ಮತ್ತು ಚೆನ್ನೈನಲ್ಲಿ 1,898 ರೂ. ಇತ್ತು. ಗೃಹಬಳಕೆಯ ಎಲ್‌ಪಿಜಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ಗೆ 903 ರೂ. ಇದೆ. ಬೆಂಗಳೂರಿನಲ್ಲಿ 905 ರೂಪಾಯಿ ಇದೆ.