ಹುಬ್ಬಳ್ಳಿ: ಪತಿ-ಪತ್ನಿ ನಡುವೆ ನಡೆದ ಗಲಾಟೆಯ ಬಳಿಕ ಸಂಧಾನ ಮಾಡಲು ಬಂದ ಪೊಲೀಸರು ಪತಿಯಿಂದ 2 ಲಕ್ಷ ರೂಪಾಯಿ ಕೊಡುವಂತೆ ಬೆದರಿಸಿದ್ದರಿಂದ ಹೆದರಿದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳಿಯ ಕೋಟಿಲಿಂಗೇಶ್ವರ ನಗರದ ನಿವಾಸಿ ನಿಖಿಲ್ (28) ಎಂಬುವರೆ ಆತ್ಮಹತ್ಯೆ ಮಾಡಿಕೊಂಡನವರು. 11 ತಿಂಗಳ ಹಿಂದೆ ನಿಖಿಲ್ ಪ್ರೀತಿ ಎಂಬುವರನ್ನು ವಿವಾಹವಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಗಲಾಟೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ನಡುವೆ ಇದರಿಂದಾಗಿ ಬೇಸತ್ತು ಪತ್ನಿ ಪ್ರೀತಿ ತನ್ನ ತವರು ಮನೆಗೆ ಹೋಗಿದ್ದರು. ಹೀಗಾಗಿ ಮತ್ತೆ ಅವರನ್ನು ಒಂದುಮಾಡುವ ಭರದಲ್ಲಿ ನಿಖಿಲ್ ಪತ್ನಿ ಪ್ರೀತಿ ಮತ್ತು ಕುಟುಂಬಸ್ಥರು ಗುರುವಾರ ಕೇಶ್ವಾಪುರ ಠಾಣೆಗೆ ನಿಖಿಲ್ ಕರೆಸಿ ಬೆದರಿಕೆ ಹಾಕಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಇನ್ನು ನೋಟಿಸ್ ನೀಡಿ ನಿಖಿಲ್ನನ್ನು ಠಾಣೆ ಕರೆಸಿ ಪೊಲೀಸರು ಮಾನಸಿಕ ಕಿರುಕುಳ ನೀಡಿದ್ದಾರೆ. ಒಂದೇ ದಿನದಲ್ಲಿ 2 ಲಕ್ಷ ರೂಪಾಯಿ ನೀಡುವಂತೆ ತಾಕೀತು ಮಾಡಿ ನಿಖಿಲ್ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು ಎಂದು ನಿಖಿಲ್ ಕುಟುಂಬದವರು ಆರೋಪ ಮಾಡಿದ್ದಾರೆ.
ಈ ಎಲ್ಲ ಘಟನೆಗಳಿಂದ ಮಾನಸಿಕವಾಗಿ ನೋವು ಅನುಭವಿಸಿದ ನಿಖಿಲ್ ಮನೆಗೆ ಬಂದು ಶುಕ್ರವಾರ ಬೆಳಗ್ಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿಖಿಲ್ ಸಹೋದರ ರಘುವೀರ್ ಗಂಭೀರ ಆರೋಪ ಮಾಡುತ್ತಿದ್ದಾರೆ.
ಇತ್ತ ಬದುಕಿ ಬಾಳಬೇಕಾದ 28 ವರ್ಷದ ಮನೆ ಮಗ ನಿಖಿಲ್ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಇಲ್ಲಿ ಆರಕ್ಷಕರು ಭಕ್ಷಕರಾಗಿ ಒಂದು ಜೀವವನ್ನು ತೆಗೆದರೋ ಇಲ್ಲವೋ ಎಂಬ ಬಗ್ಗೆ ನಿಷ್ಠಾವಂತ ಅಧಿಕಾರಿಯಿಂದ ತನಿಖೆ ನಡೆದರೆ ಸತ್ಯ ಬಯಲಿಗೆ ಬರಲಿದೆ, ಇಲ್ಲ ಎಂದರೆ ನಿಖಿಲ್ ಜತೆಗೇ ಮಣ್ಣಾಗಲಿದೆ.