ಕೋಲ್ಕತಾ: ಕಾಳಸಂತೆಯಲ್ಲಿ ಟಿಕೆಟ್ಗಳು ಬಾರಿ ಮೊತ್ತಕ್ಕೆ ಮಾರಾಟವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ವಿಶ್ವಕಪ್ನ ಅತ್ಯಂತ ಬಲಿಷ್ಠ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ವಿರುದ್ಧದ ಪಂದ್ಯಕ್ಕೆ ಆಗಮಿಸಲು ನೀಡಿದ್ದ ಪಂದ್ಯದ ನಾಲ್ಕು ಟಿಕೆಟ್‌ಗಳನ್ನು ಪಶ್ಚಿಮ ಬಂಗಾಳದ ಗವರ್ನರ್ ಸಿ. ವಿ. ಆನಂದ ಬೋಸ್ ಹಿಂದಿರುಗಿಸಿದ್ದಾರೆ.
ಹೌದು! ವಿಶ್ವಕಪ್ನ ಅತ್ಯಂತ ಬಲಿಷ್ಠ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ವಿರುದ್ಧದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇತ್ತ ಕಾತರವಾಗಿದ್ದಾರೆ. ಈ ಪಂದ್ಯ ಇನ್ನೇನು ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಆದರೆ ಗವರ್ನರ್ ಸಿ. ವಿ. ಆನಂದ ಬೋಸ್ ಅವರು ತಮಗೆ ನೀಡಿದ ಪಂದ್ಯದ ಟಿಕೆಟ್‌ಗಳನ್ನು ಹಿಂದಿರುಗಿಸಿ ಒಂದೊಳ್ಳೆ ಆಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಭವನದಲ್ಲಿ ಜನತಾ ಕ್ರೀಡಾಂಗಣ: ಕಾಳಸಂತೆಯಲ್ಲಿ ಟಿಕೆಟ್ಗಳು ಬಾರಿ ಮೊತ್ತಕ್ಕೆ ಮಾರಾಟವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಗವರ್ನರ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜಭವನದಲ್ಲಿ ಜನತಾ ಕ್ರೀಡಾಂಗಣವನ್ನು ತೆರೆದು ಇಲ್ಲಿ ದೊಡ್ಡ ಪರದೆಯೊಂದನ್ನು ಹಾಕಿ ಜನರೊಂದಿಗೆ ಪಂದ್ಯವನ್ನು ವೀಕ್ಷಿಸಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ರಾಜಭವನದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
500 ಮಂದಿಗೆ ಅವಕಾಶ: ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು ಗವರ್ನರ್ ಸಿ.ವಿ.ಆನಂದ ಬೋಸ್ ಅವರಿಗೆ ನಾಲ್ಕು ಉಚಿತ ಟಿಕೆಟ್‌ಗಳನ್ನು ಒದಗಿಸಿ ಪಂದ್ಯಕ್ಕೆ ಬರುವಂತೆ ವಿಶೇಷ ಆಹ್ವಾನ ನೀಡಿತ್ತು. ಆದರೆ ಗವರ್ನರ್ ಈ ಟಿಕೆಟ್‌ಗಳನ್ನು ಹಿಂದಿರುಗಿಸಿ ರಾಜಭವನದಲ್ಲೇ ಪಂದ್ಯ ನೋಡಲು ನಿರ್ಧರಿಸಿದ್ದಾರೆ. 500 ಜನರಿಗೆ ಪಂದ್ಯ ನೋಡುವ ಅವಕಾಶ ಇರಲಿದೆ. ಭದ್ರತಾ ದೃಷ್ಟಿಯಿಂದಾಗಿ 1 ಗಂಟೆಯ ಒಳಗೆ ಬಂದವರಿಗೆ ಮಾತ್ರ ಪ್ರವೇಶ ಇರಲಿದೆ. ಆ ಬಳಿಕ ಬಂದವರಿಗೆ ಅವಕಾಶ ಇರುವುದಿಲ್ಲ ಎಂದು ರಾಜಭವನದ ಅಧಿಕಾರಿ ತಿಳಿಸಿದ್ದಾರೆ.
ಈ ಪಂದ್ಯ ಟಿಕೆಟ್‌ಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋದಲ್ಲಿ ನವೆಂಬರ್ 1ರಿಂದ ಈವರೆಗೆ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂದ್ಯಕ್ಕೆ ಮಳೆ ಭೀತಿ: ಈ ಪಂದ್ಯವನ್ನು ಹೈವೋಲ್ಟೇಜ್ ಎಂದು ನಿರೀಕ್ಷೆ ಮಾಡಿ ಕಾದು ಕುಳಿತ ಅಭಿಮಾನಿಗಳಿಗೆ ಹವಾಮಾನ ವರದಿ ನಿರಾಸೆಯನ್ನುಂಟುಮಾಡುವ ಸುದ್ದಿಯನ್ನು ನೀಡಿದೆ. ಈ ಪಂದ್ಯಕ್ಕೆ ಮಳೆಯ ಭೀತಿ ಇದೆ ಎಂದು ಮುನ್ಸೂಚನೆ ನೀಡಿದೆ.
ಕೋಲ್ಕೋತಾದಲ್ಲಿ ಭಾನುವಾರ ರಾತ್ರಿಯ ವೇಳೆ ಶೇ. 31ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಒಂದು ಇನಿಂಗ್ಸ್ ನಡೆದರೂ ಇನ್ನೊಂದು ಇನಿಂಗ್ಸ್ ನಡೆಯುವುದು ಅನುಮಾನ ಎನ್ನಲಾಗಿದೆ. ಅಲ್ಲದೆ ಇಲ್ಲಿ ಮಳೆ ಬಂದರೆ ಆ ಬಳಿಕ ಮಂಜಿನ ಕಾಟ ತಪ್ಪಿದ್ದಲ್ಲ. ಹೀಗಾಗಿ ಮಳೆ ಬಂದರೆ ಪಂದ್ಯ ರದ್ದಾಗುವುದು ಖಚಿತ.
ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೂ ಉಭಯ ತಂಡಗಳಿಗೆ ಯಾವುದೇ ನಷ್ಟ ಸಂಭವಿಸದು. ಕಾರಣ ಈಗಾಗಲೇ ಇತ್ತಂಡಗಳು ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಶನಿವಾರ ಪಾಕಿಸ್ತಾನ ವಿರುದ್ಧ ಕಿವೀಸ್ ಸೋಲು ಕಂಡ ಕಾರಣದಿಂದ ಸೆಮಿ ಟಿಕೆಟ್ ಪಡೆಯಿತು.
ಪಿಚ್ ರಿಪೋರ್ಟ್: ಈಡನ್ ಗಾರ್ಡನ್ಸ್‌ನ(Eden Gardens) ಪಿಚ್ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬನಿ ಸಮಸ್ಯೆ ಕಾಡಲಿದೆ. ಇದು ಬೌಲರ್ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
ಸಂಭಾವ್ಯ ತಂಡ: ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ, ಜೆರಾಲ್ಡ್ ಕೋಟ್ಜಿ.