ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನಿಷ್ಠಾವಂತ ಅಧಿಕಾರಿಯ ಸಾವಿಗೆ ಕಾರಣ ಯಾರು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಅತ್ತ ಪೊಲೀಸರು ಸಹ ಆರೋಪಿಯನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. 3 ತಂಡ ರಚನೆ ಮಾಡಿ ಹುಡುಕಾಡುತ್ತಿದ್ದಾರೆ. ಹೀಗಿರುವಾಗ ಪ್ರತಿಮಾ ಭೂ ಮಾಫಿಯಾಗೆ ಬಲಿಯಾದ್ರಾ ಎಂಬ ಸುದ್ದಿ ಹರಿದಾಡುತ್ತಿದೆ.
ಖಡಕ್ ಅಧಿಕಾರಿಯಾಗಿದ್ದ ಪ್ರತಿಮಾ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿ ಭೂ ಸರ್ವೆ ಮಾಡಿದ್ದರು. ಆ ವೇಳೆ 4 ಎಕರೆ 5 ಗುಂಟೆ ಜಮೀನಿನಲ್ಲಿ ಅಕ್ರಮ ಗಣಿಗಾರಿಗೆ ಮಾಡಿ 25 ಲಕ್ಷ ರೂ. ನಷ್ಟ ಉಂಟಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರತಿಮಾ ಸರ್ಕಾರಕ್ಕೆ ವರದಿಯನ್ನು ಸಹ ಮಾಡಿದ್ದರು.
ಈ ಅಕ್ರಮ ಗಣಿಗಾರಿಕೆ ಮಾಡಿದ ಹಿನ್ನಲೆ ಶಾಸಕೊಬ್ಬರು ಸೇರಿದಂತೆ ನಾಲ್ವರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಜತೆಗೆ ಅಕ್ರಮದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿದ್ದರು. ಈ ವಿಚಾರಗಳ ಬಗ್ಗೆ ಶಾಸಕರೊಬ್ಬರು ಸೇರಿದಂತೆ ಇಬ್ಬರ ವಿರುದ್ಧ ದೇವನಹಳ್ಳಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಈ ಪ್ರಕರಣದಲ್ಲಿ ಪ್ರತಿಮಾ ಅವರು ನೀಡಿದ ಸ್ಥಳ ಪರಿಶೀಲನೆ ಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ ಎನ್ನಲಾಗಿದೆ. ಈ ಎಲ್ಲ ಅಕ್ರಮದ ಬಗ್ಗೆ ಪ್ರತಿಮಾ ಸರ್ಕಾರಕ್ಕೆ ವರದಿ ನೀಡಿದ್ದು, ಇದೇ ಕಾರಣಕ್ಕೆ ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಹಾಗಾಗಿ ಪೊಲೀಸರು ಈ ಆಯಾಮದಲ್ಲಿಯು ಸಹ ತನಿಖೆ ನಡೆಸುತ್ತಿದ್ದಾರೆ.