- ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು: ಎಎಪಿ ಆಗ್ರಹ
ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೆ.ಎಸ್. ಪ್ರತಿಮಾ ಕೊಲೆಗೆ ಆಮ್ ಆದ್ಮಿ ಪಕ್ಷ ಆಘಾತ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಾಮಾಣಿಕ ದಕ್ಷ ಅಧಿಕಾರಿಗಳು ಅದರಲ್ಲೂ ಆಯಕಟ್ಟಿನ ಸ್ಥಳಗಳಲ್ಲಿ ಇರುವಂತಹ ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಎಂದು ಎಎಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಆಗ್ರಹಿಸಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಇಡೀ ಕರ್ನಾಟಕವೇ ಬೆಚ್ಚಿ ಬೀಳಿಸುವಂತ ಘಟನೆ ಇದಾಗಿದೆ. ತನ್ನ ಬಳಿ ಕೆಲಸ ಮಾಡುವ ಸಾಮಾನ್ಯ ಚಾಲಕನೇ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಿರುವುದನ್ನು ನಂಬಲು ಸಾಧ್ಯವೇ. ಪ್ರತಿಮಾ ಅವರ ಹತ್ಯೆ ಹಿಂದೆ ಯಾರ ಕೈವಾಡವಿದೆ ಎನ್ನುವುದೇ ಪ್ರಶ್ನೆಯಾಗಿದೆ. ತಮ್ಮ ಇಲಾಖೆಯಲ್ಲಿನ ಹಲವಾರು ಹಗರಣಗಳನ್ನು ಬಯಲಿಗೆಳೆದಿದ್ದ ದಕ್ಷ ಅಧಿಕಾರಿಯ ಹತ್ಯೆಯಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಾ, ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತಿದ್ದ ಉಪನಿರ್ದೇಶಕಿ ಇಂದು ಇಲ್ಲವಾಗಿರುವುದು ನೋವಿನ ಸಂಗತಿ ಎಂದರು.
ಯಾವುದೇ ದಕ್ಷ, ಪ್ರಾಮಾಣಿಕ ಅಧಿಕಾರಿಗೆ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದರೆ ನಮ್ಮ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದು ತಿಳಿಯುತ್ತದೆ. ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ನಾವು ರಕ್ಷಣೆ ಕೊಡಲು ಸಾಧ್ಯವಾಗುತ್ತಾ ಎಂದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯ ಕೊಲೆಯಾಗಿದ್ದರೂ, ಉಡಾಫೆ ಉತ್ತರ ಕೊಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕರ್ತವ್ಯ ಲೋಪಕ್ಕಾಗಿ ಕೆಲಸದಿಂದ ತೆಗೆದ ಕಾರಣಕ್ಕೆ ಆತ ಅಧಿಕಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದರೆ ಸರ್ಕಾರ ಯಾವ ರೀತಿ ರಕ್ಷಣೆ ಕೊಡುತ್ತಿದೆ ಎಂಬುದು ತಿಳಿಯುತ್ತಿದೆ. ಇಂತಹ ಘಟನೆಗಳಿಂದ ಮಹಿಳೆಯರು ಭಯದಿಂದ ಬದುಕುವಂತಾಗಿದೆ. ಒಂದು ಕಡೆ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಲೇ ಇವೆ. ಅವುಗಳಿಗೆ ನ್ಯಾಯ ಸಿಗದೆ ಮುಚ್ಚಿಹೋಗುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ. ಗಲ್ಲಿಗೇರಿಸುವಂತ ಕೆಲಸವಾಗಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಬೀಳಲಿದೆ. ಮಹಿಳಾ ಸಬಲೀಕರಣ, ಮಹಿಳಾ ರಕ್ಷಣೆ ನೀಡುತ್ತೇವೆ ಎಂದು ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಮನುಷ್ಯತ್ವ ಇದ್ದರೆ, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ನಮ್ಮ ಪಕ್ಷದ ಪರವಾಗಿ ಆಗ್ರಹಿಸುತ್ತೇನೆ ಎಂದು ಹೇಳಿದರು.
ತಮ್ಮ ಅಪರಾಧಗಳನ್ನು ಒಪ್ಪಿಕೊಳ್ಳುವವರಿಗೆ ಅಥವಾ ಅಪರಾಧಗಳು ಸಾಬೀತಾದಾಗ ಅಂತಹ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಘಟನೆ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ ಎಂಬುದನ್ನು ತನಿಖೆ ನಡೆಸಬೇಕು ಎಂದು ನಾನು ಸಚಿವರು, ಗೃಹ ಇಲಾಖೆ ಮತ್ತು ಮುಖ್ಯಮಂತ್ರಿಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದರು.