ಬೆಂಗಳೂರು: ರಾಜ್ಯ ಕಾಂಗ್ರೆಸ್ ಚುನಾವಣೆಯಲ್ಲಿ ಕೊಟ್ಟ ಮಹತ್ವಾಕಾಂಕ್ಷೆ ಯೋಜನಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಈ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಈಗಾಗಲೇ ಉಚಿತವಾಗಿ ಇದರ ಸೌಲಭ್ಯ ಪಡೆದುಕೊಂಡಿದ್ದಾರೆ.
ಈಗಲೂ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲೂ ಈ ಯೋಜನೆ ಮುಂದಿವರಿಯುತ್ತದೆಯೇ ಎಂಬುವುದೇ ಸದ್ಯಕ್ಕೆ ಎದ್ದಿರುವ ಪ್ರಮುಖ ಪ್ರಶ್ನೆಯಾಗಿದೆ. ಈ ಪ್ರಶ್ನೆ ಮೂಡಲೂ ಕಾರಣವೂ ಇಲ್ಲ ಎಂದಿಲ್ಲ. ಇದಕ್ಕೆ ಬಲವಾದ ಕಾರಣ ಇದೆ.
ಅದೇನೆಂದರೆ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣ ಕೇವಲ ಆರೇ ತಿಂಗಳಲ್ಲಿ ಖಾಲಿಯಾಗುತ್ತಿದೆ. ಸಿಎಂ ಶಕ್ತಿ ಯೋಜನೆಗೆ ಬಜೆಟ್‌ನಲ್ಲಿ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಆದರೆ, ನವೆಂಬರ್ 7 ರವರೆಗೆ ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್ ಮೌಲ್ಯವು 2174 ಕೋಟಿ 14 ಲಕ್ಷದ 38 ಸಾವಿರದ 866 ರೂ. ತಲುಪಿದೆ.
ಈ ನಡುವೆ ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳು ಬಾಕಿಯಿದ್ದು, ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಡಿಸೆಂಬರ್‌ವರೆಗೆ ಮಾತ್ರ ಬರಬಹುದು ಎಂದು ಸಾರಿಗೆ ನಿಗಮಗಳ ಅಧಿಕಾರಿಗಳೇ ಹೇಳುತ್ತಿದ್ದಾರೆ. ಹೀಗಾಗಿ ಇನ್ನೂ ಆರು 4 ತಿಂಗಳಿಗೆ ಸರ್ಕಾರವೇ ಯೋಜನೆಗೆ ಅನುದಾನವನ್ನು ಕೊಡಬೇಕಾಗುತ್ತದೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಖಾಲಿ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾತ್ವಕಾಂಕ್ಷೆಯ ಶಕ್ತಿ ಯೋಜನೆಗೆ ಡಿಸೆಂಬರ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಹೀಗಾಗಿ ಡಿಸೆಂಬರ್ ವರೆಗೆ ನೀಡಲಾದ ಒಟ್ಟು ಟಿಕೆಟ್ ಮೌಲ್ಯವನ್ನು ಗಣನೆಗೆ ತೆಗೆದುಕೊಂಡು, ನಾವು ಹೆಚ್ಚಿನ ಹಣವನ್ನು ನೀಡುತ್ತೇವೆ ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದ್ದಾರೆ.
ಈ ಯೋಜನೆ ಜಾರಿಯಾದ ಕೆಲವು ತಿಂಗಳ ನಂತರ ಉಚಿತ ಬಸ್‌ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಎಂದು ನಾವು ಊಹಿಸಿದ್ದೆವು. ಆದರೆ ಪ್ರಯಾಣಿಕರ ಮಹಿಳೆಯರ ಸಂಖ್ಯೆ ಇನ್ನೂ ಶೇ.10-12ರಷ್ಟು ಹೆಚ್ಚಾಗಿದೆಯೇ ಹೊರತು ಕಡಿಮೆ ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಗೆ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಮತ್ತಷ್ಟು ಹೆಚ್ಚು ಮಾಡುವ ಅಗತ್ಯವಿದೆ. ಈ ಬಗ್ಗೆ ತುರ್ತಾಗಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಬೆಳವಣಿಗೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಇತ್ತ ಬಿಜೆಪಿ ಕಾಂಗ್ರೆಸ್‌ನ ಕಾಲೆಳೆದಿದ್ದು, ಕಾಂಗ್ರೆಸ್‌ನ “ಶಕ್ತಿ” ಯೋಜನೆಗೆ ಆರು ತಿಂಗಳೊಳಗೆ ನಿಶ್ಯಕ್ತಿ ಆವರಿಸಿದೆ. ಒಂದು ವರ್ಷಕ್ಕೆ ಮೀಸಲಿಟ್ಟ ಶಕ್ತಿ ಯೋಜನೆ ಹಣ ಆರೇ ತಿಂಗಳಿಗೆ ಖಾಲಿಯಾಗಿದೆ, ಅಂದರೆ ಕಾಂಗ್ರೆಸ್ ಎಂತಹ ತಿಮಿಂಗಿಲ ಎಂಬುದನ್ನು ನೀವೇ ಊಹಿಸಿ ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಉಚಿತ 10 ಕೆಜಿ ಅಕ್ಕಿಯ ಅನ್ನಭಾಗ್ಯ ಇದುವರೆಗೂ ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ ಬಡವರಿಗೆ ನೀಡುವ 05 ಕೆಜಿ ಅಕ್ಕಿಯಲ್ಲಿ ಸಹ 02 ಕೆಜಿ ಅಕ್ಕಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಳುಂ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಇನ್ನು ಚುನಾವಣೆಗೂ ಮುನ್ನ ಮನೆ-ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ, ಚುನಾವಣೆಯಲ್ಲಿ ಗೆದ್ದ ನಂತರ ಇಲ್ಲಸಲ್ಲದ ಕಂಡಿಷನ್ ಹಾಕಿ, ಈಗ ಸರಿಯಾಗಿ ವಿದ್ಯುತ್ ನೀಡದೆ ಕರ್ನಾಟಕ ಕತ್ತಲಾಗಿದೆ. “ನಿಮ್ಮ ಪುಕ್ಸಟ್ಟೆ ವಿದ್ಯುತ್ ಬೇಡ ಸ್ವಾಮಿ, ನಮಗೆ ಸರಿಯಾಗಿ ವಿದ್ಯುತ್ ನೀಡಿ” ಎಂದು ಕರ್ನಾಟಕದ ಜನತೆ ಪರಿಪರಿಯಾಗಿ ಬೇಡಿಕೊಳ್ಳುವಷ್ಟರ ಮಟ್ಟಿಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕಣ್ಣಿಗೆ ರಾಚುತ್ತಿದೆ.
ರಾಜ್ಯದಲ್ಲಿ ದುರಾಡಳಿತ ನೀಡುತ್ತಿರುವ ಕಾಂಗ್ರೆಸ್ ಚುನಾವಣೆಗೂ ಮುನ್ನ ಉಚಿತ, ಖಚಿತ, ನಿಶ್ಚಿತ ಎಂದೆಲ್ಲ ಕರ್ನಾಟಕದ ಜನತೆಯ ಕಿವಿ ಮೇಲೆ ಇಟ್ಟಿದ್ದ ಹೂವುಗಳೆಲ್ಲವೂ ಬೋಗಸ್!! ಅಧಿಕಾರಕ್ಕೇರಿ ಆರು ತಿಂಗಳು ಮುಗಿಯುತ್ತಾ ಬಂದರೂ ಘೋಷಿಸಿದ ಗ್ಯಾರಂಟಿಗಳಲ್ಲಿ ನುಡಿದಂತೆ ನಡೆಯದಿರುವುದೇ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಎಂದು ಬಿಜೆಪಿ ಕುಟುಕಿದೆ.