ಪಿರಿಯಾಪಟ್ಟಣ: ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಇಬ್ಬರ ಮೇಲೆ ದೂರು ದಾಖಲಾಗಿರುವ ಘಟನೆ ನಡೆದಿದೆ.
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಮಂಗಳವಾರ ತಹಶೀಲ್ದಾರ್ ಕುಂಞಿ ಅಹಮದ್ ತಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ಚಾಮರಾಯನಕೋಟೆ ಜಗದೀಶ್ ಹಾಗೂ ಮುಮ್ಮಡಿ ಕಾವಲು ದೊಡ್ಡಯ್ಯ ಎಂಬುವವರ ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದವರ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಇಬ್ಬರು ಮಧ್ಯಾಹ್ನ 2 ಗಂಟೆಯಲ್ಲಿ ಏಕಾಏಕಿ ತಹಸೀಲ್ದಾರ್ ಕಚೇರಿಗೆ ಧಾವಿಸಿ ಜಮೀನಿನನ್ನು ಪೋಡಿ ಮಾಡುವ ವಿಷಯ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತನಾಡುವ ವೇಳೆ ಏಕಾಏಕಿ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಜಗದೀಶ್ ಮತ್ತು ದೊಡ್ಡಯ್ಯ ಎಂಬುವವರು ತಹಸೀಲ್ದಾರ್ ಟೇಬಲ್ ಮೇಲೆ ಇಟ್ಟಿದ್ದ ಫೈಲ್ಗಳನ್ನು ತೆಗೆದು ಹರಿದು ಹಾಕಿ ತಹಸೀಲ್ದಾರ್ ಕುಂಞಿ ಅಹಮದ್ ಅವರನ್ನು ಏಕವಚನದಲ್ಲಿ ಬೈಯ್ದು ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ಹಲ್ಲೆಯನ್ನು ತಡೆದಿದ್ದಾರೆ. ನಂತರ ತಹಸೀಲ್ದಾರ್ ಅವರು ಸರ್ಕಲ್ ಇನ್ಸ್ಪೆಕ್ಟರ್ ಕೆ.ವಿ.ಶ್ರೀಧರ್ ಅವರಿಗೆ ದೂರವಾಣಿ ಕರೆ ಮಾಡಿ ಕಚೇರಿಯ ಬಳಿ ಬರುವಂತೆ ತಿಳಿಸಿದ್ದಾರೆ. ಆದರೆ, ಶ್ರೀಧರ್ ಅವರು ನ್ಯಾಯಾಲಯದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತುಮಕೂರಿನ ನ್ಯಾಯಾಲಯಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.
ನಂತರ ಸಬ್ ಇನ್ಸ್ಪೆಕ್ಟರ್ಗೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕೆ ಬಾರದೆ ಇರುವಾಗ ತಹಸೀಲ್ದಾರ್ ಕುಂಞಿ ಅಹಮದ್ ಅವರು ತಾವೇ ಪೊಲೀಸ್ ಠಾಣೆಗೆ ಹೋಗಿ ಈ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.