ಬೆಂಗಳೂರು: ರಾಜ್ಯದಲ್ಲಿ ತುರ್ತು ಚಿಕಿತ್ಸೆ ಸಿಗದೆ ಯಾರು ಅಸುನೀಗಬಾರದು ಎಂಬ ದೃಷ್ಟಿಯನ್ನು ನಮ್ಮ ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಹೆಚ್ಚುವರಿ ಆಂಬುಲೆನ್ಸ್ ಖರೀದಿಗೆ ಹಣಕಾಸು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದರು.
ಮುಖ್ಯಮಂತ್ರಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಆಂಬುಲೆನ್ಸ್‌ಗಳನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದರು.
ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ತಿಳಿಸಿದರು.
ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಆಂಬುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840ಕ್ಕೂ ಹೆಚ್ಚು ಆಂಬುಲೆನ್ಸ್ ಗಳ ಅಗತ್ಯವಿದೆ. ಪ್ರತೀ ತಾಲೂಕಿನಲ್ಲಿ 4 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಾ ಪ್ರತೀ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತೀ ಜಿಲ್ಲೆಯಲ್ಲಿ MRI ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನೊಸ್ಟಿಕ್ ಸೆಂಟರ್‌ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗುತ್ತಿದೆ ಎಂದರು.
ಇನ್ನು ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಉಳಿದ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ. ಈಗ ಸರ್ಕಾರಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದೇನೆ. ಪ್ರಸ್ತುತ ಮೆಡಿಕಲ್ ಕಾಲೇಜುಗಳು ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ವೈದ್ಯರು ಕೂಡ ಜಾಸ್ತಿಯಾಗಿ ಬಿಟ್ಟಿದ್ದಾರೆ. ವೈದ್ಯರ ಹುದ್ದೆ ಭರ್ತಿಗೆ ಉತ್ತರ ಕರ್ನಾಟಕಕ್ಕೂ ಹೆಚ್ಚು ಗಮನ ಕೊಡಲು ಹೇಳಿದ್ದೇನೆ ಎಂದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ : ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಸಿಎಂ ಅಕ್ಕಿ ಕೊಡೋದು ಮೋದಿ ಚೀಲ ಅಂತ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆಹಾರ ಭದ್ರತೆ ಕಾಯ್ದೆ ತಂದಿದ್ದು ಯಾರಪ್ಪ? ಮನಮೋಹನ್ ಸಿಂಗ್ ಅಲ್ವಾ? ಕೊರೊನಾ ನಂತರ ಉಚಿತ ಅಕ್ಕಿ ಕೊಡ್ತಿರೋದು. ಅಕ್ಕಿ ಚೀಲಕ್ಕೂ ಮೂರು ರೂ. ಪಡೆದುಕೊಳ್ಳುತ್ತಾರೆ. ಗ್ಯಾರಂಟಿ ವಿರೋಧಿಸುವ ಗಿರಾಕಿ ಮೋದಿಯವರು ಈಗ ಅವರೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಎಂದು ಮೊಟಕಿದರು.
ಜನರಿಗೆ ಅನುಕೂಲ ಕೊಡೋದ್ರಲ್ಲಿ ದ್ವಂದ್ವ ಇರಬಾರದು. ಈ ನಿಟ್ಟಿನಲ್ಲಿ ನಾವು ಗ್ಯಾರಂಟಿ ಘೋಷಣೆ ಮಾಡಿ ಸುಮ್ನೆ ಕೂತಿಲ್ಲ, ಅದರ ಜಾರಿ ಮಾಡಿದ್ದೇವೆ. ಮಹಿಳೆಯರು ಫ್ರೀಯಾಗೊ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. 5 ಕೆಜಿ ಅಕ್ಕಿ ಬದಲು ಹಣ ಕೊಡ್ತೀವಿ, ಪುಕ್ಕಟೆ ಕರೆಂಟ್ ಕೊಡುತ್ತಿದ್ದೇವೆ. ಹಿಂದಿನವರು ಇದೆಲ್ಲ ಕೊಡ್ತಿದ್ರಾ?, ಇದೇ ಮೋದಿ ಗ್ಯಾರಂಟಿಯಿಂದ ಆರ್ಥಿಕ ದಿವಾಳಿ ಆಗುತ್ತೆ ಅಂದ್ರು. ದಿವಾಳಿನೂ ಆಗಿಲ್ಲ ಗಿವಾಳಿನೂ ಆಗಿಲ್ಲ, ಅವರು ಎಲ್ಲ ಸುಳ್ಳು ಹೇಳುತ್ತಾರೆ ಎಂದರು.