ಬೆಂಗಳೂರು: 108 ಆಂಬುಲೆನ್ಸ್ ಕೆಲ ಚಾಲಕರಿಗೂ ಖಾಸಗಿ ಆಸ್ಪತ್ರೆಯವರಿಗೂ ಒಳ ಒಪ್ಪಂದ ಇರುತ್ತದೆ. 108 ಆಂಬುಲೆನ್ಸ್ ಚಾಲಕರು ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು 108 ಆರೋಗ್ಯ ಕವಚ ತುರ್ತು ಆಂಬುಲೆನ್ಸ್ ಸೇವೆಗೆ ನೂತನ 262 ಆಂಬುಲೆನ್ಸ್‌ಗಳನ್ನು ಮುಖ್ಯಮಂತ್ರಿಗಳೊಂದಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಉತ್ತಮ ಆರೋಗ್ಯ ವ್ಯವಸ್ಥೆ ನೀಡುವಲ್ಲಿ ಹಾಗೂ ವೈದ್ಯರನ್ನು ರೂಪಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಯಿಂದ ನಗರದವರಿಗೆ ಆಂಬುಲೆನ್ಸ್ ಸೇವೆ ಲಭ್ಯವಾಗಬೇಕೇಂಬುದು ನಮ್ಮ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು 262 ಆಂbuಲೆನ್ಸ್‌ಗಳನ್ನು ಲೋಕಾರ್ಪಣೆಗೊಳಿಸಿದ್ದೇವೆ ಎಂದು ಹೇಳಿದರು.
ಇನ್ನು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕರೆಮಾಡಿದ 15 ರಿಂದ 20 ನಿಮಿಷದಲ್ಲಿ ಆಂಬುಲೆನ್ಸ್ ಸೇವೆ ಸಿಗಲಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. .
ಚಾಲಕರ ವಿರುದ್ಧ ಡಿಕೆಶಿ ಗರಂ : 108 ಆಂಬುಲೆನ್ಸ್‌ನವರಿಗೂ ಖಾಸಗಿ ಆಸ್ಪತ್ರೆಯವರಿಗೂ ಒಂದು ಒಪ್ಪಂದ ಇರುತ್ತೆ. ಆಂಬುಲೆನ್ಸ್ ಚಾಲಕರಿಗೆ ಈ ಚೇಷ್ಟೆ ಇದೆ. ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ ಎಂದು ಗರಂ ಆದರು. ಇನ್ನು ಅಲ್ಲಿಗೆ ಹೋದ ಮೇಲೆ ಬಿಲ್ ಜಾಸ್ತಿ ಆಗೇ ಆಗುತ್ತೆ. ಅವರು ಬಿಲ್ ಕೊಡುವುದಕ್ಕೆ ಆಗದೇ ಶಾಸಕರ ಬಳಿ ಬರುತ್ತಾರೆ.
ನಾನು ತಿಂಗಳಿಗೆ ಇದೇ ರೀತಿ 20 ಲಕ್ಷ ಕೊಡ್ತೀನಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಚೆನ್ನಾಗಿದೆ. ಆಂಬುಲೆನ್ಸ್ ಚಾಲಕರು ರೋಗಿಗಳನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ. ನಾನು ಮೊನ್ನೆ ವಿಕ್ಟೋರಿಯಾದಲ್ಲಿ ಹಲ್ಲಿನ ನೋವಿಗೆ ಚಿಕಿತ್ಸೆ ಪಡೆದೆ. ಅಲ್ಲಿ ವ್ಯವಸ್ಥೆ ಚೆನ್ನಾಗಿದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆಂಬುಲೆನ್ಸ್ ಸೇವೆಯಲ್ಲಿ ಸಾಕಷ್ಟು ಕುಂದು ಕೊರತೆ ಇದೆ. ಗುಣಮಟ್ಟದ ವೃದ್ಧಿಯಲ್ಲಿ ಆರೋಗ್ಯ ಕವಚ ಸೇವೆ ಕುಂಠಿತವಾಗಿದೆ. ಲೋಪವನ್ನು ಸರಿಪಡಿಸಲು ಮುಂದಾಗಿದ್ದೇವೆ. ಹಳೆಯ ಆಂಬುಲೆನ್ಸ್ ವಾಹನಗಳಿಗೆ ಮುಕ್ತಿ ಕೊಟ್ಟು ಇಂದು 262 ಹೊಸ ವಾಹನಗಳಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.