ಕನಿಷ್ಠ ಪಿಂಚಣಿ, ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹಿಸಿ ದೆಹಲಿಯಲ್ಲಿ ನಿವೃತ್ತ ನೌಕರರ ಉಪವಾಸ ಸತ್ಯಾಗ್ರಹ
- ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಸೇರಿ ರಾಜ್ಯದಿಂದ 360 ಮಂದಿ ನಿವೃತ್ತ ನೌಕರರು ಭಾಗಿ
ನ್ಯೂಡೆಲ್ಲಿ: ಕನಿಷ್ಠ ಪಿಂಚಣಿ ಬೇಡಿಕೆ 7500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಪಿಎಸ್ ನಿವೃತ್ತ ನೌಕರರ ಪ್ರತಿಭಟನಾ ಸಮಾವೇಶ ಎನ್‌ಎಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ಡಿ.7ರ ಇಂದು ಜರುಗಿತು.
ಈ ಪ್ರತಿಭಟನಾ ಸಭೆಯಲ್ಲಿ ಕರ್ನಾಟಕದಿಂದ ಸುಮಾರು 360 ಮಂದಿ ನಿವೃತ್ತ ನೌಕರರು ಭಾಗವಹಿಸಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿದ ನಿವೃತ್ತರ ಸಂಖ್ಯೆ ಸುಮಾರು 20 ಸಾವಿರದಷ್ಟು ಇತ್ತು.
ಪಾರ್ಲಿಮೆಂಟ್ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಇಂದಿನ ಸಭೆಯಲ್ಲಿ ಆಗಮಿಸಿದ್ದ ವಿವಿಧ ರಾಜ್ಯಗಳ ಮುಖಂಡರು ಮಾತನಾಡಿ ಕೂಡಲೇ ನಮ್ಮ ಕನಿಷ್ಠ ಪಿಂಚಣಿ ಬೇಡಿಕೆ 7500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು.
ಇನ್ನು ನಾಳೆ ಅಂದರೆ ಡಿ.8ರಿಂದ ನಿರಂತರವಾಗಿ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ನಂತರ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲು ಈಗಾಗಲೇ ನಿರ್ಧರಿಸಿದ್ದಾರೆ.
ನಾಳೆಯಿಂದ ಅಂದರೆ ಡಿ.8ರಿಂದ ಡಿ.24ರವರೆಗೆ ಜಂತರ್ ಮಂತರ್‌ನಲ್ಲಿ ತೀವ್ರತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿದರೆ ಕೈ ಬಿಡಲಾಗುವುದು ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.