ಮೈಸೂರು: ‘ಮೈಸೂರು ಜಿಲ್ಲಾ ಪತ್ರಕರ್ತರ ಸಂಘ’ದಲ್ಲಿ 2017–18ರಿಂದ 2019–20ನೇ ಸಾಲಿನಲ್ಲಿ ನಡೆದಿರುವ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಅಂದಿನ ಅಧ್ಯಕ್ಷ ಸಿ.ಕೆ.ಮಹೇಂದ್ರ ಸೇರಿ ಏಳು ಮಂದಿ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶಕ್ಕೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶನಿವಾರ ತಡೆಯಾಜ್ಞೆ ನೀಡಿದೆ.
ಸಂಘದ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಸಂಘದ ಸದಸ್ಯ ಹುಲ್ಲಹಳ್ಳಿ ಮೋಹನ್ ಅವರು ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮೋಹನ್ ಅವರ ಅರ್ಜಿಯನ್ನು ಅಂಗಿಕರಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಅಂದಿನ ಅಧ್ಯಕ್ಷ ಸಿ.ಕೆ.ಮಹೇಂದ್ರ ಹಾಗೂ ಪದಾಧಿಕಾರಿಗಳಾಗಿದ್ದ ಕೆ.ಜೆ.ಲೋಕೇಶಬಾಬು, ಎಲ್.ಜಿ.ದಕ್ಷಿಣಾಮೂರ್ತಿ, ಎಂ.ಸುಬ್ರಹ್ಮಣ್ಯ, ರಾಘವೇಂದ್ರ, ಧರ್ಮಾಪುರ ನಾರಾಯಣ ಹಾಗೂ ಮಂಜುನಾಥ್ ಅಲಿಯಾಸ್ ಕೋಟೆ ಮಂಜು ವಿರುದ್ಧ ಪ್ರಕರಣ ದಾಖಲಿಸುವಂತೆ ಸಿವಿಲ್ ಕೋರ್ಟ್ ನಿರ್ದೇಶನ ನೀಡಿತ್ತು.
ಈ ಏಳು ಮಂದಿ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೃಷ್ಣರಾಜ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಿ.ಕೆ. ಮಹೇಂದ್ರ ಅರ್ಜಿ ಸಲ್ಲಿಸಿದ್ದರು.
ಸಿ.ಕೆ. ಮಹೇಂದ್ರ ಅವರ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶ ಪಿ.ಜೆ. ಸೋಮಶೇಖರ್ ಅವರಿದ್ದ ನ್ಯಾಯಪೀಠ ಸಿವಿಲ್ ನ್ಯಾಯಾಲಯದ ಆದೇಶಕ್ಕೆ ಶನಿವಾರ ತಡೆಯಾಜ್ಞೆ ನೀಡಿದ್ದು, 2024ರ ಜ.31ಕ್ಕೆ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಫಾಲಾಕ್ಷ ವಕಾಲತ್ತು ವಹಿಸಿದ್ದರು.