ಬಳ್ಳಾರಿ: ಕರ್ತವ್ಯ ನಿರತ ಸರ್ಕಾರಿ ಸಾರಿಗೆ ನೌಕರರ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಇದ್ದರೂ ಅದನ್ನು ಲೆಕ್ಕಿಸದೆ ಪ್ರಯಾಣಿಕರು ಮತ್ತು ಅವರ ಸಂಬಂಧಿಗಳು ಹಲ್ಲೆ ಮಾಡುತ್ತಿರುವುದು ಅಲ್ಲಲ್ಲಿ ನಡೆಯುತ್ತಲೇ ಇದೆ.
ಈ ಹಲ್ಲೆಯಿಂದ ಸಾರಿಗೆಯ ಹಲವಾರು ಮಂದಿ ಚಾಲಕರು ಮತ್ತು ನಿರ್ವಾಹಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೂ ಇನ್ನು ನೌಕರರ ಮೇಲೆ ಹಲ್ಲೆ ಮಾಡುವುದು ತಪ್ಪಿಲ್ಲ.
ಇದೇ ಡಿ.28ರಂದು ನಿರ್ವಾಹಕನ ಮೇಲೆ 8-10 ಜನ ಸೇರಿಕೊಂಡು ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ಘಟಕ -2ರಲ್ಲಿ ನಡೆದಿದ್ದು, ಈ ಸಂಬಂಧ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಮೊನ್ನೆ (ಡಿ.28) ದಾವಣಗೆರೆ – ಬಳ್ಳಾರಿ ನಡುವೆ ಕಾರ್ಯಾಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಸಂಡೂರು ಘಟದ ಬಸ್ (ನಂ.KA-35 F 350) ದಾವಣಗೆರೆಯಿಂದ ಸಂಡೂರ್ ಬಸ್ ನಿಲ್ದಾಣಕ್ಕೆ ಸಯಂಕಾಲ 4ಗಂಟೆ ವೇಳೆಗೆ ತಲುಪಿ. ಈ ಸಮಯದಲ್ಲಿ ಬಳ್ಳಾರಿಗೆ ಬರುವುದಕ್ಕೆ ಹತ್ತಿದ ಇಬ್ಬರು ಮಹಿಳೆಯರು ಇನ್ನು ಇಬ್ಬರು ಬರಬೇಕು ಬಸ್ ನಿಲ್ಲಿಸಿ ಎಂದು ಕೇಳಿದರು.
ಇಲ್ಲ ಈಗಾಗಲೇ ತಡವಾಗಿದೆ ಅವರು ಇನ್ನೊಂದು ಬಸ್‌ನಲ್ಲಿ ಬರಲಿ ಬಿಡಿ ಎಂದು ಹೇಳಿದೆ. ಆದರೆ, ಅಷ್ಟಕ್ಕೆ ಅವರು ಕೋಪಮಾಡಿಕೊಂಡು ನನ್ನ ಮೇಲೆ ಜಗಳ ಮಾಡಿ ಬಳ್ಳಾರಿಯಲ್ಲಿ ನಮ್ಮ ಸಂಬಂಧಿಕರಿದ್ದಾರೆ ಅಲ್ಲಿ ನಿನ್ನನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿ ಬಸ್ ಇಳಿದು ಹೋದರು.
ಬಳಿಕ ಸಂಜೆ 6.10ರ ವೇಳೆಗೆ ಬಳ್ಳಾರಿಯ ಹೊಸ ಬಸ್ ನಿಲ್ದಾಣಕ್ಕೆ ಬಸ್ ಹೋಗುವಾಗ ಕೆಲವರು ಬೇಕು ಅಂತಲೇ ನಮ್ಮ ಬಸ್‌ಗೆ ಬೈಕ್ ಅಡ್ಡಹಾಕುವಂತೆ ಬರುತ್ತಿದ್ದರು. ಅದನ್ನು ನೋಡಿ ನಾವು ಪ್ರಯಾಣಿಕರ ಸಹಿತವಾಗಿ ಬಳ್ಳಾರಿಯ 2 ಘಟಕಕ್ಕೆ ಬಸ್‌ಅನ್ನು ವೇಗವಾಗಿ ತಂದು ನಿಲ್ಲಿಸಿದೆವು.
ಆದರೂ ಹಿಂಬಾಲಿಸಿಕೊಂಡು ಬಂದ 15-20 ಜನರು ಡಿಪೋ ಒಳಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಿರ್ವಾಹಕ ಮಲ್ಲಿಕಾರ್ಜುನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಿರ್ವಾಹಕ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಮಿಂಚೇರಿ ಬಾಬು ಎಂಬಾತ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.