ಬೆಂಗಳೂರು: 2024ರ ಹೊಸ ವರ್ಷದ ಬೆಂಗಳೂರು ಮಹಾನಗರ ಸಾರಿಗೆ ನಿಗಮಕ್ಕೆ ಸಿಹಿಯನ್ನು ನೀಡಿದೆ. ಹೌದು! ವರ್ಷದ ಮೊದಲ ದಿನವೇ ಬಿಎಂಟಿಸಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಜ.1 ರಂದು ನಿಗಮದಲ್ಲಿ 27,09, 659 ಮಂದಿ ಪ್ರಯಾಣ ಮಾಡಿದ್ದಾರೆ.
ಈ ಮೂಲಕ ಹೊಸ ವರ್ಷದ ಆಚರಣೆಯಲ್ಲಿ ಭಾಗಿಯಾಗಿದ್ದವವರು ಬಿಎಂಟಿಸಿ ಓಡಿಸಿದ್ದ ಹೆಚ್ಚುವರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದರ ಪರಿಣಾಮ ಸೋಮವಾರ ಒಂದೇ ದಿನ ಬಿಎಂಟಿಸಿಗೆ 4,37,70,000 ರೂ. ಆದಾಯ ಬಂದಿದೆ.
ನ್ಯೂ ಇಯರ್ ವೆಲ್‌ಕಮ್‌ಗೆ ಬೆಂಗಳೂರಿನ ವಿವಿಧೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕೆ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ಒದಗಿಸಿತ್ತು.
ಮಹಾತ್ಮಗಾಂಧಿ ರಸ್ತೆ (ಎಂ.ಜಿ.ರೋಡ್), ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ನಿಲ್ದಾಣದಿಂದ ಬಸ್ ಸೇವೆಯನ್ನು ಬಿಎಂಟಿಸಿ ಕಲ್ಪಿಸಿತ್ತು.
ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ಸೇವೆ ನಿಯೋಜಿಸಿದ್ದರಿಂದ ಬಿಎಂಟಿಸಿಯ ಬಸ್‌ಗಳಲ್ಲಿ ಲಕ್ಷಾಂತರ ಜನ ಪ್ರಯಾಣಿಸಿ ಒಂದೇ ದಿನದಲ್ಲಿ4.37 ಕೋಟಿ ರೂ.ಆದಾಯಗಳಿಸುವುದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೆರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.