ಬೆಂಗಳೂರು: ಇಪಿಎಫ್ಒ ಅಧಿಕಾರಿಗಳು ನಿವೃತ್ತರನ್ನು ಪ್ರತ್ಯೇಕಿಸಿ, 2014ರ ಮೇಲಿನವರು ಹಾಗೂ ಕೆಳಗಿನವರು ಎಂದು ತಾರತಮ್ಯ ಧೋರಣೆ ತಳದಿದ್ದು, ಈ ರೀತಿಯ ಭೇದಭಾವ ಮಾಡದೆ, ಎಲ್ಲ ನಿವೃತ್ತರು ಒಂದೇ ಎಂದು ಪರಿಗಣಿಸಿ, ಎಲ್ಲರೂ ಜಂಟಿ ಆಯ್ಕೆ ಪತ್ರ ಸಲ್ಲಿಸಲು ಅನುವು ಮಾಡಿಕೊಡಬೇಕೆಂದು ಎನ್ಎಸಿ ಸಂಯೋಜಕ ರಮಾಕಾಂತ ನರಗುಂದ ಆಗ್ರಹಿಸಿದರು.
ಎನ್ಎಸಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ವತಿಯಿಂದ ಶುಕ್ರವಾರ (ಜ.12) ಬೆಂಗಳೂರಿನ ಎಲ್ಲ ಸಂಘ ಸಂಸ್ಥೆಗಳ, ಕಂಪನಿಗಳ ಇಪಿಎಸ್ ನಿವೃತ್ತರು, ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಆವರಣದಲ್ಲಿ ಜಮಾಯಿಸಿದ ಸಾವಿರಾರು ನಿವೃತ್ತರು ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಈ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆಯಲ್ಲಿ ಪಿಎಫ್ ಅಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ, ಆಕ್ರೋಶ ವ್ಯಕ್ತಪಡಿಸಿದ ರಮಾಕಾಂತ ನರಗುಂದ ಅವರು, ನಮ್ಮ ಸಹನೆಯ ಕಟ್ಟೆ ಒಡೆದಿದ್ದು ನೀವು ನಮಗೆ ನೀಡುತ್ತಿರುವ ಪಿಂಚಣಿ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ? ಜನರ ಭಾವನೆ ನಿಮಗೆ ಅರ್ಥವಾಗುವುದಿಲ್ಲವೇ? ಇನ್ನೆಷ್ಟು ಜನರು ತಮ್ಮ ಉಸಿರು ಚೆಲ್ಲಬೇಕು ಎಂದು ಪ್ರಶ್ನಿಸಿದರು.
ಇನ್ನು ಎಲ್ಲರಿಗೂ ಅನ್ವಯವಾಗುವಂತೆ ಕಾನೂನು ಚೌಕಟ್ಟಿನಲ್ಲಿ ಪಿಂಚಣಿ ನೀಡಬೇಕು, ಇಲ್ಲವೇ ನಾನೀಗಾಗಲೇ ಘೋಷಿಸಿರುವಂತೆ ನನ್ನ ನಿರ್ಧಾರವನ್ನು ತೆಗೆದುಕೊಳ್ಳಲು ಬಿಟ್ಟುಬಿಡಿ ಎಂದು ಕಠೂರ ಶಬ್ದಗಳನ್ನು ಬಳಸಿ ಅಧಿಕಾರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದರು.
ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಕಳೆದೊಂದು ತಿಂಗಳಿನಿಂದ ದೆಹಲಿಯಲ್ಲಿ ಕಮಾಂಡರ್ ಅಶೋಕ್ ರಾವತ್ ಹಾಗೂ ಮುಖಂಡರು ನಡೆಸಿದ ಹೋರಾಟದ ಪ್ರತಿಫಲವಾಗಿ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳು ಸಂಧಾನಕ್ಕೆ ಮುಂದಾಗಿದ್ದು, ಆದರೆ ಇವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ, ವಿಳಂಬ ನೀತಿ ಅನುಸರಿಸುತ್ತಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಅಧಿಕಾರಿಗಳ ನಡೆಯಿಂದ ನೊಂದು ಮತ್ತೆ ನಾವು ಈ ದಿನದ ಹೋರಾಟಕ್ಕೆ ಕರೆ ನೀಡಿದ್ದು, ಈಗ ನಮ್ಮ ಹೋರಾಟ ಅಂತಿಮ ಘಟ್ಟ ತಲುಪಿದೆ. ಹೀಗಾಗಿ ನಮ್ಮ ಬೇಡಿಕೆಗಳನ್ನು ಬರುವ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಅಗ್ರಹಿಸಿದರು.
ಇದೇ ಜನವರಿ 29ರಂದು ಇಪಿಎಫ್ಒ ಅಧಿಕಾರಿಗಳು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಂದು ಕೂಡ ನಮ್ಮ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಿ, ಕೇಂದ್ರ ಸರ್ಕಾರವನ್ನು ಬಡಿದೆಬ್ಬಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಎನ್ಎಸಿ ಅಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ನಮ್ಮ ಮುಖಂಡರ ಕರೆಯ ಮೇರೆಗೆ ಇಂದು ರಾಜ್ಯಾದ್ಯಂತ ಎಲ್ಲ ಇಪಿಎಸ್ ನಿವೃತ್ತರು ಹೋರಾಟಕ್ಕಿಳಿದಿದ್ದು, ಇದು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಈಗ ನಾವು ಕೈಕಟ್ಟಿ ಕುಳಿತಲ್ಲಿ, ಇನ್ನೆಂದಿಗೂ ಜಯ ಸಾಧಿಸಲು ಸಾಧ್ಯವಿಲ್ಲ ಎಂದರು.
ದೆಹಲಿಯಲ್ಲಿ ಜರುಗಿದ ನಮ್ಮ ಮುಖಂಡರ ಹೋರಾಟದ ಸಂಪೂರ್ಣ ಚಿತ್ರಣವನ್ನು, ದೃಶ್ಯಮಾಧ್ಯಮ ಹಾಗೂ ಪತ್ರಿಕೆಯವರು, ಚಿತ್ರೀಕರಿಸಿ ಬಿತ್ತರಿಸಿದ್ದುದು, ನಿವೃತ್ತರ ಹೋರಾಟದ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ನಾವೀಗ ಜಯದ ಹೊಸ್ತಿಲಿನಲ್ಲಿದ್ದು, ಕಣ್ಮುಚ್ಚಿ ಕುಳಿತು ಕೊಳ್ಳಬಾರದು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ನಮ್ಮ ನೇತಾರ ಅಶೋಕ್ ರಾಹುತ್ ಅವರು ಸರಿಯಾದ ದಿಕ್ಕಿನಲ್ಲಿ ನಮ್ಮನ್ನೆಲ್ಲ ಕೊಂಡೊಯ್ಯುತ್ತಿದ್ದು, ಚುನಾವಣೆ ಹತ್ತಿರ ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದಲ್ಲಿ, ಅವರನ್ನು ಬಗ್ಗು ಬಡಿವ ಶಕ್ತಿ ನಮಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಈ ಹೋರಾಟ ನಡೆಸೋಣ ಎಂದು ಕರೆ ನೀಡಿದರು.
ಸಂಘದ ಉಪಾಧ್ಯಕ್ಷ ಆರ್.ಸುಬ್ಬಣ್ಣ ಮಾತನಾಡಿ, ನಾವು ಹಲವಾರು ವರ್ಷಗಳಿಂದ ಪಿಂಚಣಿ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಿದ್ದು, ನಮ್ಮ ಮುಖಂಡರು ದೆಹಲಿಯಲ್ಲಿ ಕಳೆದ ತಿಂಗಳು ನಡೆಸಿದ ಹೋರಾಟದ ಪ್ರತಿಫಲವಾಗಿ ಸರ್ಕಾರ ಮಾತುಕತೆಗೆ ಮುಂದಾಗಿದೆ. ನಾವಿನ್ನು ಗುರಿ ಮುಟ್ಟಿಲ್ಲ, ಇಪಿಎಫ್ಒ ಅಧಿಕಾರಿಗಳು ಸಲ್ಲದ ಸುತ್ತೋಲೆಗಳನ್ನು (circulars) ಹೊರಡಿಸುತ್ತಿದ್ದು, ವಿನಾಕಾರಣ ಅರ್ಹ ಪಿಂಚಣಿ ದಾರರಿಗೆ ನೀಡಬೇಕಾದ ಪಿಂಚಣಿಯನ್ನು ನೀಡದೆ, ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಕಮೆಂಡರ್ ಅಶೋಕ್ ರಾವುತ್ ಅವರ ಸಂದೇಶದ ಮೇರೆಗೆ ದೇಶಾದ್ಯಂತ ಎಲ್ಲ ಇಪಿಎಸ್ ನಿವೃತ್ತರು ಜಿಲ್ಲಾವಾರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ನೀಡಿದ್ದು, ಅದರಂತೆ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪ, ಪದಾಧಿಕಾರಿಗಳಾದಮನೋಹರ್, ನಾಗರಾಜು, ರುಕ್ಮೇಶ್, ಎಚ್ಎಎಲ್, ಆಪಲ್, ಎಚ್‌ಎಮ್‌ಟಿ, ಕೆಎಂಎಫ್, ಹಾಗೂ ಕಿರ್ಲೋಸ್ಕರ್, ಎಲ್ಲ ಕಂಪನಿಗಳ ನಿವೃತ್ತ ನೌಕರರು ಭಾಗವಹಿಸಿದ್ದರು.