ಬೆಂಗಳೂರು: ಮೊಬೈಲ್ ಪಾವತಿ ಆ್ಯಪ್‌ಗಳ ಮೂಲಕ ಸಂಸ್ಥೆಯ ಸಿಬ್ಬಂದಿಯಿಂದ 1.5 ಕೋಟಿ ರೂ.ಗಳಷ್ಟು ಲಂಚ ಪಡೆದ ಆರೋಪದ ಮೇಲೆ ಬಿಎಂಟಿಸಿ ಜಿಗಣಿ 27ನೇ ಘಟಕದ ಏಳು ಮಂದಿ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಘಟಕದ ಮೇಲ್ವಿಚಾರಕಿ ಆರ್.ಮಂಜುಳಾ, ಕಿರಿಯ ಸಹಾಯಕರಾದ ಪ್ರೀತಂ, ಎಲ್.ಎಸ್.ಮನೋಜ್ ಕುಮಾರ್, ಎ.ಸುಮಾ, ಶಾಂತವ್ವ, ಸಹಾಯಕ ಲೆಕ್ಕಿಗ ವಿ.ಧನಂಜಯ, ಸಹಾಯಕ ಕುಶಲಕರ್ಮಿ ಜಿ.ದೇವರಾಜ್ ಅಮಾನತುಗೊಂಡವರು.
ಆರೋಪಿಗಳು ಸಹೋದ್ಯೋಗಿಗಳಿಂದ ಮೊಬೈಲ್ ಪಾವತಿ ಆ್ಯಪ್‌ಗಳ ಮೂಲಕ ಹಣ ಜಮೆ ಮಾಡಿಸಿಕೊಂಡು ಡಿಜಿಟಲ್ ಹಣದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಮರೆಮಾಚಿದ್ದ ಆರೋಪಿಗಳು ಶಿಸ್ತುಕ್ರಮದಿಂದ ತಪ್ಪಿಸಿಕೊಂಡಿದ್ದರು.
ಮತ್ತೆ ಈ ಕುರಿತು ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆ ನಡೆಸಿದಾಗ ಲಂಚ ಪ್ರಕರಣ ಸಾಬೀತಾಗಿದೆ. ಈ ಏಳು ಮಂದಿಯ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಗಳು ಮೊಬೈಲ್ ಪಾವತಿ ಆ್ಯಪ್‌ಗಳ ಮೂಲಕ ಲಂಚ ಪಡೆದಿರುವ ಸಾಕ್ಷ್ಯಗಳು ಲಭಿಸಿದ್ದವು.
ಏಳು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 1.5 ಕೋಟಿ ರೂ.ಗಳು ಜಮೆಯಾಗಿದೆ. ಈ ಮೊತ್ತವನ್ನು ಅವರು ಆನ್‌ಲೈನ್ ಹೂಡಿಕೆಯಲ್ಲಿ ತೊಡಗಿಸಿರುವುದು ಕಂಡುಬಂದಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಈ ಎಲ್ಲ ಆರೋಪಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಶಿಸ್ತುಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಆರೋಪಿಗಳನ್ನು ‘ವಿಚಾರಣಾ ಇತ್ಯರ್ಥಪೂರ್ವ ಅಮಾನತು’ ಮಾಡಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.