ನ್ಯೂಡೆಲ್ಲಿ: ರೈತರಿಗೆ ನೀಡಿದ ಭರವಸೆ ಹುಸಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರುವರಿ 13ರಂದು ದೆಹಲಿ ಚಲೋ ಆಂದೋಲನವನ್ನು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳ ನೂರಾರು ರೈತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಇಂದು (ಜ.21) ದೆಹಲಿಯ ರಖಪ್ಚಂದ್ ಗುರುದ್ವಾರ ಸಭಾಂಗಣದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆಯೋಜಿಸಿದ್ದ ರಾಷ್ಟ್ರೀಯ ರೈತ ಮುಖಂಡರ ಸಭೆಯಲ್ಲಿ ರೈತರ ದೆಹಲಿ ಚಲೋ ಆಂದೋಲನ ನಡೆಸಲು ತೀರ್ಮಾನಿಸಲಾಯಿತು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರಬರಬೇಕು.
ಇವುಗಳಲ್ಲಿ ಪ್ರಮುಖವಾಗಿ ದೇಶಾದ್ಯಂತ 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10 ಸಾವಿರ ಪಿಂಚಣಿ ಯೋಜನೆ ಬರಬೇಕು ಎಂಬ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ ಕೈಗೊಳ್ಳದಿದ್ದರೆ ಫೆಬ್ರವರಿ 13ರಂದು ಎಲ್ಲ ರಾಜ್ಯಗಳಿಂದ ಲಕ್ಷಾಂತರ ರೈತರು ರ್ಯಾಲಿ ಮೂಲಕ ದೆಹಲಿ ಚಲೋ ಆಂದೋಲನ ನಡೆಸಲಿದ್ದೇವೆ ಎಂದರು.
ಫೆ.13ರಂದು ದೇಶದ ಎಲ್ಲ ರೈತ ಸಂಘಟನೆಗಳ ಮಹಾಸಂಗಮ ರ್ಯಾಲಿ ನಡೆಯಲಿದ್ದು, ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ 14 ಕಿಸಾನ್ ಮಹಾ ಪಂಚಾಯತ್ ಸಮಾವೇಶಗಳನ್ನು ನಡೆಸಿ ರೈತರ ಜಾಗೃತಿ ಪಡಿಸಲಾಗಿದೆ ಎಂದು ವಿವರಿಸಿದರು.
ಎಸ್.ಕೆ.ಎಂ (ರಾಜಕೀಯತರ ಮುಖಂಡರಾದ ಪಂಜಾಬ್ನ ಜಗಜಿತ್ ಸಿಂಗ್ ದಲೈವಾಲ್, ಮಧ್ಯಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯುಕೊಹರ್, ಬಿಹಾರದ ಅರುಣ್ ಸಿನ್ಹಾ, ಉತ್ತರ ಪ್ರದೇಶದ ಹರ್ಪಲ್ ಬಿಲಾರಿ, ಲಕ್ವೀನ್ದಂದರ್ ಸಿಂಗ್, ಜರ್ರನಲ್ ಸಿಂಗ್ , ಶಿರಸಾ ಸಿಂಗ್, ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.