ಚಿತ್ರದುರ್ಗ: ಮದುವೆ ಮುಗಿಸಿಕೊಂಡು ಕಲಬುರಗಿಯಿಂದ ಮಾಗಡಿಗೆ ವಾಪಸ್ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಚಳ್ಳಕೆರೆ ಹತ್ತಿರದ ಚಿಕ್ಕಹಳ್ಳಿ ಬಳಿ ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರೊಂದಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಜರುಗಿದೆ.
ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಕಲಬುರಗಿಯಲ್ಲಿ ನಡೆದ ಮದುವೆಯೊಂದಕ್ಕೆ ಜರನ್ನು ಕರೆದುಕೊಂಡು ಹೋಗಲು ಮಾಗಡಿಯ ಕುಟುಂಬವೊಂದು ಬುಕ್ ಮಾಡಿತ್ತು. ಅದರಂತೆ ಕಲಬುರಗಿಗೆ ಹೋಗಿ ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಈ ವೇಳೆ ಬಸ್ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್‌ನಲ್ಲಿ ತುಂಬಿದ್ದ ಇಟ್ಟಿಗೆಗಳು ಒಡೆದು ಚೂರುಚೂರಾಗಿ ರಾಷ್ಟ್ರೀಯ ಹೆದ್ದಾರಿ 150ಎ ಮೇಲೆ ಬಿದ್ದಿರುವ ದೃಶ್ಯ ಭಯದ ವಾತಾವರಣ ಸೃಷ್ಟಿಸುವಂತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಬಸ್ಸಿನಲ್ಲಿದ್ದವರ ಪೈಕಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಗಾಯಾಳುಗಳನ್ನು ಚಳ್ಳಕೆರೆ ತಾಲೂಕಿನ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.