ಬೆಂಗಳೂರು: ಕೇಂದ್ರ ಸರ್ಕಾರ ನಮ್ಮ ನಾಯಕರಿಗೆ ಕೊಟ್ಟ ಮಾತನ್ನು ತಪ್ಪಿದ್ದರಿಂದ ಮತ್ತೆ ಎರಡನೇ ಸುತ್ತಿನ ಧರಣಿ ಉಪವಾಸ ಸತ್ಯಾಗ್ರಹವನ್ನು ಜನವರಿ 31 ರಿಂದ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ ರಾವುತ್ ಹಾಗೂ ಇತರೆ ಮುಖಂಡರ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನೂರಾರು ನಿವೃತ್ತರು ಆರಂಭಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ, ಉಪವಾಸ ಸತ್ಯಾಗ್ರಹ ಕೈಗೊಂಡಿರುವ ನಮ್ಮ ಮುಖಂಡರ ಆರೋಗ್ಯ ವೃದ್ಧಿಸಲಿ ಎದು ಎಂದು ಪ್ರಾರ್ಥಿಸುತ್ತಾ, ಇದೇ ಫೆ.4ರಂದು ರಾಜ್ಯದಿಂದಲೂ ಹೋರಾಟ ರೂಪಿಸುವ ಸಲುವಾಗಿ ನಿವೃತ್ತ ನೌಕರರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿ ಇಂದಿಗೆ ಮೂರು ದಿನ ಕಳೆದಿದೆ. 70 ರಿಂದ 80 ವಯಸ್ಸಿನ ವಯೋವೃದ್ಧರು ತಮ್ಮ ಸಂಧ್ಯಾ ಕಾಲದಲ್ಲಿ, ಕೊರೆಯುವ ಚಳಿಯಲ್ಲಿ ಬದುಕಿಗಾಗಿ ಹೋರಾಟ ಮಾಡುತ್ತಿರುವುದನ್ನು ನೋಡಿದರೆ, ಎಂಥವರಿಗೂ ಕರುಳು ಕಿತ್ತು ಬರುತ್ತದೆ.
ನಿವೃತ್ತರಲ್ಲಿ ತಾರತಮ್ಯ ಏಕೆ? ಸರ್ವರೂ ಸಮಾನರು ಎಂಬ ನೀತಿಯನ್ನು ಕೇಂದ್ರ ಸರ್ಕಾರ ಏಕೆ ಪಾಲಿಸುತ್ತಿಲ್ಲ!!!. ಸೆಪ್ಟಂಬರ್ 1, 2014 ಕಟ್ ಆಫ್ ಡೇಟ್ (cut off date) ಎಂದು ಗೆರೆ ಹಾಕಿ, ಹಿರಿಯರನ್ನು ಸಂಪೂರ್ಣವಾಗಿ ಕಡೆಗಣಿಸಿ, ನಂತರ ನಿವೃತ್ತರಾದ ವರಿಗೆ ಸೌಲಭ್ಯ ಇದೆ ಎನ್ನುವುದು ಎಷ್ಟು ಸರಿ?.
ಸಾಮಾನ್ಯ ನಾಗರಿಕರಿಗೂ ಕೂಡ ನೈಸರ್ಗಿಕ ನ್ಯಾಯದ ಅರಿವಿದೆ. ಒಟ್ಟಾರೆ ದೇಶದಲ್ಲಿ ಹೆಚ್ಚುವರಿ ಪಿಂಚಣಿ ಕೋರಿ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹದಿನೇಳುವರೆ ಲಕ್ಷ ಮಾತ್ರ, ಇದರಲ್ಲಿ ಸೆಪ್ಟೆಂಬರ್ 1,2014 ರ ನಂತರ ನಿವೃತ್ತರಾದವರ ಸಂಖ್ಯೆ ಶೇಕಡ 70% ಇದ್ದು, ಉಳಿದ 30% ನಿವೃತ್ತರಿಗೆ ಸಂಬಂಧಿಸಿದಂತೆ ಅಶೋಕ್ ರಾಹುತ್ ಅವರು ಪ್ರತಿಪಾದಿಸುತ್ತಿರುವ ಸೂತ್ರ, ಕನಿಷ್ಠ ಹೆಚ್ಚುವರಿ ಪಿಂಚಣಿ, ಇದು ನ್ಯಾಯ ಸಮ್ಮತವಾಗಿದ್ದು, ಸರ್ಕಾರಕ್ಕೆ ಇದರಿಂದ ಯಾವುದೇ ಹೆಚ್ಚಿನ ಹೊರೆ ಎನ್ನಿಸುವುದಿಲ್ಲ ಎಂದು ವಿವರಿಸಿದ್ದಾರೆ.
ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ನಮ್ಮ ಮುಖಂಡರ ಹೋರಾಟ ದಿನದಿಂದ ದಿನಕ್ಕೆ ಬಿಗುಡಾಯಿಸುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುವ ಮುಂಚೆ, ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಸೂಕ್ತ. ಈ ಎಲ್ಲ ಬೆಳವಣಿಗೆಗಳು ಸರ್ವೋಚ್ಚ ನ್ಯಾಯಾಲಯದ ಬದಿಯಲ್ಲಿಯೇ ನಡೆಯುತ್ತಿದ್ದು, ಇವೆಲ್ಲವನ್ನು ನ್ಯಾಯಾಲಯ ಗಮನಿಸುತ್ತಿಲ್ಲ ಎಂದು ತಿಳಿಯಬೇಡಿ.
ಆರ್‌ಸಿ ಗುಪ್ತ, ನ್ಯಾಯಾಲಯ ನಿಂದನಾ ಪ್ರಕರಣ ಹಾಗೂ ಏಳು ಪುನರ್ ಪರಿಶೀಲನಾ ಅರ್ಜಿಗಳು ಇನ್ನೂ ಬಾಕಿ ಇದ್ದು, ಈಗಲೂ ಕಾಲ ಮಿಂಚಿಲ್ಲ. ಪಾರ್ಲಿಮೆಂಟ್ ಅಧಿವೇಶನ ಮುಗಿಯುವ ಮೊದಲು ಸೆಪ್ಟೆಂಬರ್ 1, 2014ಕ್ಕೂ ಮೊದಲು ನಿವೃತ್ತರಾದವರಿಗೆ ಸಂಬಂಧಿಸಿದಂತೆ, ಸೂಕ್ತ ತೀರ್ಮಾನ ಕೈಗೊಳ್ಳುವುದು ಒಳ್ಳೆಯದು. ತಪ್ಪಿದಲ್ಲಿ ಹಿರಿಯರ ಶಾಪ ತಟ್ಟದೇ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ನಿವೃತ್ತರು ಧೃತಿಗೆಡುವುದು ಬೇಡ, ನಾವಿನ್ನು ಶಸ್ತ್ರಾಸ್ತ್ರ ತ್ಯಜಿಸಿಲ್ಲ. ಸರ್ವೋಚ್ಚ ನ್ಯಾಯಾಲಯದ ನಮ್ಮ ಹಿರಿಯ ವಕೀಲರು, ಕಾನೂನು ಸಮರಕ್ಕೆ ಸರ್ವಸನ್ನದ್ಧರಾಗುತ್ತಿದ್ದಾರೆ. (Do or die old slogon, now it is changed, we will do it before die) “ಮಾಡು ಇಲ್ಲವೇ ಮಡಿ” ಹಳೆಯ ಘೋಷಣೆ “ಮಾಡಿಯೇ ಮಡಿಯುತ್ತೇವೆ” ಎಂಬ ಕಿಚ್ಚು ನಮ್ಮಲ್ಲಿದೆ. ಪಾರ್ಲಿಮೆಂಟ್ ಅಧಿವೇಶನದ ಈ ಸಂದರ್ಭದಲ್ಲಿ ಹಿರಿಯರು ಕಿರಿಯರೆನ್ನದೆ ನಾವೆಲ್ಲರೂ ಒಗ್ಗೂಡಿ ಜಾಗೃತರಾಗುವುದು ಅವಶ್ಯಕ ಎಂದು ಕರೆ ನೀಡಿದ್ದಾರೆ.
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೂತೋಟದಲ್ಲಿ ವಾಯುವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲ ಅಂಶಗಳು, ಮುಂದಿನ ಹೋರಾಟದ ರೋಪುರೆಷೆ ಬಗ್ಗೆ ಮುಕ್ತವಾಗಿ ಚರ್ಚಿಸೋಣ. ಎಲ್ಲಾ ಇಪಿಎಸ್ ನಿವೃತ್ತರು ನಾಳೆ ಅಂದರೆ ಫೆ.4 ರ ಭಾನುವಾರ ಬೆಳಗ್ಗೆ 8 ಗಂಟೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.