ಬೆಳಗಾವಿ: ಹುಕ್ಕೇರಿ ತಾಲೂಕಿನ ನರಸಿನಂಗಪೂರ ಗ್ರಾಮದಲ್ಲಿ ರಾತ್ರಿ ವೇಳೆ 6ಕ್ಕೂ ಹೆಚ್ಚು ಮನೆಗಳಲ್ಲಿ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದು, ಇದರಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನರಸಿಂಗಪೂರ ಗ್ರಾಮ ಹೊಂದಿಕೊಂಡಿದೆ. ಈ ಗ್ರಾಮದಲ್ಲಿನ ಅಂಬೇಡ್ಕರ್ ಗಲ್ಲಿ ಹಾಗೂ ಪಾಟೀಲ ಗಲ್ಲಿಯಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿಸಿದ್ದಾರೆ.
ಯಾರು ಇಲ್ಲದ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಖದೀಮರು ಮೊದಲೇ ಪ್ಲಾನ್ ರೂಪಿಸಿ 6ಕ್ಕೂ ಹೆಚ್ಚು ಮನೆಗಳಿಗೆ ರಾತ್ರೋರಾತ್ರಿ ನುಗ್ಗಿ ಹಣ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಅಲ್ಲದೇ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ಹೊತ್ತೋಯ್ದಿದ್ದಾರೆ.
ಹಣ ಆಭರಣಗಳನ್ನು ಕಳೆದುಕೊಂಡಿರುವ ಮನೆಯ ಮಾಲೀಕರು ಈಗ ಕಂಗಲಾಗಿದ್ದು ಜೀವನಕ್ಕೆ ಆಧಾರವಾಗಲಿ ಎಂದು ತೆಗೆದಿಟ್ಟಿದ್ದ ಎಲ್ಲ ವಸ್ತುಗಳನ್ನು ಕದೀಮರು ಕಳವು ಮಾಡಿ ನಮ್ಮ ಜೀವನವನ್ನು ನರಕವಾಗಿಸಿದ್ದಾರೆ ಎಂದು ಗೋಳಾಡುತ್ತಿದ್ದಾರೆ.
ಇನ್ನು ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖದೀಮರ ಪತ್ತೆ ಬಲೆ ಬೀಸಿದ್ದಾರೆ.