ಬೆಂಗಳೂರು: ದೇಶದ ಸೈನಿಕರು ಹೇಗೆ ಗಡಿಯಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೋ ಹಾಗೆಯೇ ನಾಡಿನ ಒಳಗೆ ಸಾರಿಗೆ ನೌಕರರು ಕೂಡ ಕರ್ತವ್ಯದಲ್ಲಿ ಮಗ್ನರಾಗಿದ್ದಾರೆ.
ಒಂದು ಗಂಟೆ ಬಸ್‌ಗಳು ತಡವಾದರೆ ನೂರಾರು ಮಂದಿ ತಾವು ತಲುಪಬೇಕಾದ ಸ್ಥಳವನ್ನು ತಲುಪುತ್ತೇವೋ ಇಲ್ಲವೋ ಎಂಬ ಚಿಂತೆಯಲ್ಲಿ ಒದ್ದಾಡುತ್ತಿರುತ್ತಾರೆ. ಅಂಥ ಜನರಿಗೆ ಸಂಜೀವಿನಿಯಂತೆ ಧಾವಿಸುವ ಸಾರಿಗೆ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಅವರ ಸ್ಥಳಕ್ಕೆ ತಲುಪಿಸುತ್ತಾರೆ. ಈ ರೀತಿ ಸೇವೆ ಮಾಡುವ ಇವರು ನಿಜವಾಗಲು ಸಾರ್ವಜನಿಕ ಸೇವಕರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.
ಇನ್ನು ಇಂಥ ಸಾರಿಗೆ ನೌಕರರನ್ನು ನಾಡಿನ ಜನರು ಗೌರವದಿಂದ ಕಾಣಬೇಕು. ಇದಕ್ಕೂ ಮಿಗಿಲಾಗಿ ರಾಜ್ಯ ಸರ್ಕಾರ ಈ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮೀನಮೇಷ ಎಣಿಸಬಾರದು. ಆದರೆ, ಕಳೆದ ಬಿಜೆಪಿ ಸರ್ಕಾರ ಈ ನೌಕರರನ್ನು ಭಾರೀ ತುಚ್ಯವಾಗಿ ನಡೆಸಿಕೊಂಡಿದ್ದು ಮಾತ್ರ ಖೇದಕರ ಸಂಗತಿ.
ಬಿಜೆಪಿಗರಂತೆ ಕಾಂಗ್ರೆಸ್ ಸರ್ಕಾರ ನಡೆಸಿಕೊಳ್ಳದೆ ಸಾರಿಗೆ ಸಿಬ್ಬಂದಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವಲ್ಲಿ ಹಿಂದೇಡು ಹಾಕಬಾರದು. ಜತೆಗೆ 2020 ಜನವರಿಯಿಂದ-2023ರ ಫೆಬ್ರವರಿ ನಡುವೆ ನಿವೃತ್ತರಾಗಿರುವ ನೌಕರರಿಗೆ ದೊರಕಬೇಕಿರುವ ಸೌಲಭ್ಯಗಳನ್ನು ನೀಡಬೇಕಿದೆ. ಇದನ್ನು ತಡಮಾಡದೆ ರಾಜ್ಯ ಸರ್ಕಾರ ಕೊಡಬೇಕು.
ಈಗಾಗಲೇ 60 ವಸಂತಗಳನ್ನು ದಾಟಿರುವ ಜೀವಗಳು ನೀವು ತಡವಾಗಿ ಕೊಡುವ ಸೌಲಭ್ಯಗಳನ್ನು ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲವೇನೋ. ಅದಕ್ಕೆ ಆ ಹಿರಿಯ ಜೀವಗಳು ಬದುಕಿರುವಾಗಲೇ ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸುವತ್ತ ಸರ್ಕಾರ ಮುಂದಾಗಬೇಕಿದೆ.
ಇನ್ನು ಈ ಬಗ್ಗೆ ಈಗಾಗಲೇ ನಿವೃತ್ತ ನೂರಾರು ನೌಕರರು ಮುಖ್ಯಮಂತ್ರಿ, ಸಾರಿಗೆ ಸಚಿವ, ಸಂಬಂಧಪಟ್ಟ ನಾಲ್ಕೂ ನಿಗಮಗಳ ಎಂಡಿಗಳಿಗೂ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಧರಣಿಯನ್ನು ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಇನ್ನಾದರೂ 38 ತಿಂಗಳ ವೇತನ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮೈಸೂರು ಭಾಗದ ನಿವೃತ್ತ ನೌಕರರಾದ ನಟರಾಜ್, ನಾಗಮಣಿ, ದೇವರಾಜ್ ಮುಂತಾದವರು ಮನವಿ ಮಾಡಿದ್ದಾರೆ.