ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳು (KSRTC, BMTC, NWKRTC, KKRTC) ಸಿಹಿ ಸುದ್ದಿ ನೀಡಿವೆ.
ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ತೆರಳಬಹುದಾಗಿ.
ಉಚಿತ ಪ್ರಯಾಣವನ್ನು ಬೆಳೆಸುವ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತಾವು ಸಂಚರಿಸುವ ಬಸ್‌ನ ನಿರ್ವಾಹಕರಿಗೆ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ವಿದ್ಯಾರ್ಥಿಗಳು ಸಾಮಾನ್ಯ ಸೇವೆ ನೀಡುವ ಬಸ್‌ನಲ್ಲಿ ಉಚಿತವಾಗಿ ಪರೀಕ್ಷಾ ಕೇಂದ್ರದವರೆಗೆ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿದ್ಯಾರ್ಥಿ ಮತ್ತು ಪಾಲಕರ ಕೋರಿಕೆಯ ಮೇರೆಗೆ ಬಸ್ಗಳನ್ನು ಪರೀಕ್ಷಾ ಕೇಂದ್ರದ ಬಳಿ ನಿಲ್ಲಿಸಲಾಗುವುದು ಎಂದು ನಾಲ್ಕೂ ನಿಗಮಗಳ ಅಧಿಕಾರಿಗಳು ತಿಳಿಸಿದ್ದು, ನಿರ್ವಾಹಕರು ಈ ಬಗ್ಗೆ ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವ್ಯವಸ್ಥೆ ಮಾಡುವ ಮೂಲಕ ಸರಿಯಾದ ಸಮಯಕ್ಕೆ ಪರೀಕ್ಷೆಗೆ ಹಾಜರಾಗಲು ಸಹಕರಿಸಬೇಕು ಎಂದು ತಿಳಿಸಿದ್ದಾರೆ.