ಚಾಮರಾಜನಗರ: ಪಂಜಾಬ್ ಹರಿಯಾಣ ರಾಜ್ಯಗಳ ರೈತರ ಮೇಲೆ ಪೊಲೀಸರು ನಡೆಸುತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಮುಖಂಡರು ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯ ಪತ್ರ ಸಲ್ಲಿಸಿದ್ದಾರೆ.
ಇಂದು (ಫೆ.23) ನಗರದಲ್ಲಿ ಅರೆಬೆತ್ತಲೆ ಮೆರೆವಣಿ ಮಾಡಿ ಪ್ರತಿಭಟನೆ ನಡೆಸಿದ ನೀಗಿಯೋಗಿಗಳು ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಲಾದ ಪ್ರಧಾನಿ ಅವರು ದೇಶದ ಜನರನ್ನು ಹೇಗೆ ಉದ್ಧಾರ ಮಾಡುತ್ತಾರೆ ಎಂದು ಕಿಡಿಕಾರಿದರು.
ಇನ್ನು ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ದೇಶದ ರೈತರ ಪರವಾಗಿ ಹೋರಾಟ ಮಾಡುತ್ತಿರುವ ಪಂಜಾಬ್ ಹರಿಯಾಣ ರಾಜ್ಯಗಳ ರೈತರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ರೈತರ ಮೇಲೆ ಕೇಂದ್ರ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ಎಸಗುತ್ತಿದೆ ಇದು ನಿಲ್ಲಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಮಾನವ ಹಕ್ಕು ದಮನ ಮಾಡುತ್ತಿದೆ ಪ್ರಜಾಸತ್ತಾತ್ಮಕವಾಗಿ ಚಳವಳಿ ಮಾಡಲು ದೆಹಲಿಗೆ ಬರುತ್ತಿದ್ದ ರೈತರನ್ನು ದೆಹಲಿ ಗಡಿಭಾಗದಲ್ಲಿ ಉಗ್ರಗಾಮಿಗಳನ್ನು ನಿಗ್ರಹಿಸುವ ರೀತಿಯಲ್ಲಿ ದೇಶದ ರೈತರನ್ನು ಬಗ್ಗು ಬಡಿಯಲು ವಾಮ ಮಾರ್ಗದ ಮೂಲಕ ಹೊರಟಿರುವುದು ಖಂಡಣೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ದಾಳಿಯಿಂದ ರೈತರು ಸಾಯುತ್ತಿದ್ದಾರೆ, ಇದು ಕೂಡಲೇ ನಿಲ್ಲಬೇಕು. ಅಧಿಕಾರ ಬಲದಿಂದ ರೈತರ ಚಳವಳಿಯನ್ನು ನಾಶ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ 70ರಷ್ಟು ರೈತರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ, ನಾವು ಸರ್ಕಾರದ ಭಿಕ್ಷೆ ಕೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇವೆ. ಈಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ, ಇಲ್ಲದಿದ್ದರೆ ಇಡೀ ದೇಶದ ರೈತರು ಬೀದಿ ಬೀದಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಿಮ್ಮ ಮಂತ್ರಿಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಶಾಸನ ಜಾರಿ ಆಗಲೇಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಲೇಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು. ಭಾರತ ಸರ್ಕಾರ ಡಬ್ಲ್ಯೂಟಿಒ ಒಪ್ಪಂದದಿಂದ ಹೊರಬರಬೇಕು. ಫಸಲ್ ಬಿಮಾ ಬೆಳೆ ಯೋಜನೆ ಪದ್ಧತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಪ್ರಮುಖವಾಗಿ ಕಳೆದ ಒಂದೂವರೆ ವರ್ಷ ದೆಹಲಿ ಗಡಿಯಲ್ಲಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡ 750 ರೈತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ದೊರೆಯಲೇಬೇಕು. ಎಲ್ಲ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯದ ರೈತರು ನಾವು ಸದಾ ದೆಹಲಿ ಹೋರಾಟದ ಜತೆಯಲ್ಲಿ ಬೆಂಬಲವಾಗಿ ನಿಲ್ಲುತ್ತೇವೆ. ನಾವು ಯಾರು ಹೇಡಿಗಳಲ್ಲ. ನಾವು ಯಾರು ದೇಶದ್ರೋಹಿಗಳು ಅಲ್ಲ, ರೈತರ ಕೆಣಕಿ ಉಳಿದವರಿಲ್ಲ ಎಂಬುದನ್ನು ಅರಿತುಕೊಳ್ಳಿ ಇದು ನಮ್ಮ ಎಚ್ಚರಿಕೆ ಸಂದೇಶ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.