ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಇಂದಿನಿಂದ (ಮಾ.4) ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರ ಸಮಾನ ಮನಸ್ಕರ ವೇದಿಕೆ ಹಮ್ಮಿಕೊಂಡಿದ್ದು, ನೂರಾರು ನೌಕರರು ಭಾಗವಹಿಸಿದ್ದಾರೆ.
ಇಂದು ಬೆಳಗ್ಗೆ 10ಗಂಟೆಗೆ ಸ್ವಾತಂತ್ರ್ಯ ಉದ್ಯಾನವನಕ್ಕೆ ಬಂದು ಜಮಾವಣೆಗೊಂಡ ನೂರಾರು ನೌಕರರು ಅಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ವೇಳೆ ಇಂದಿನ ಸರ್ಕಾರವು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಪ್ರಣಾಳಿಕೆಯಲ್ಲಿ ಒಂದಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ಸಾರಿಗೆ ನೌಕರರಿಗೂ ವಿಸ್ತರಿಸುವ ಭರವಸೆಯನ್ನು ಕಾಲ ವಿಳಂಬವಿಲ್ಲದೆ ಕೂಡಲೆ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಹಿಂದೆ ಡಿಸೆಂಬರ್ 2020 ಮತ್ತು ಏಪ್ರಿಲ್ 2021ರ ಮುಷ್ಕರಕ್ಕೆ ಸಂಬಂಧಿಸಿದಂತೆ ನೌಕರರ ವಿರುದ್ಧ ಕೈಗೊಂಡ ಎಲ್ಲ ಶಿಸ್ತಿನ ಕ್ರಮ, ವಜಾ ಮತ್ತು ಪೊಲೀಸ್ ಪ್ರಕರಣಗಳನ್ನು ರದ್ದುಮಾಡಿ ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನು 01-01-2020 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಒಂದೇ ಕಂತಿನಲ್ಲಿ ಶೇ.15ರಷ್ಟು ಹೆಚ್ಚಳವಾಗಿರುವ ವೇತನದ ಹಿಂಬಾಕಿಯನ್ನು ಪಾವತಿಸಬೇಕು. ಮುಖ್ಯವಾಗಿ 2020 ರಿಂದ ನಿವೃತ್ತರಾಗಿರುವ ನೌಕರರಿಗೆ 01-01-2020 ರಿಂದ ವೇತನ ವಿಮರ್ಷೆ ಮಾಡಿ ಬಾಕಿ ಹಣವನ್ನು ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತ್ತಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಸಿ ಸಂಘಗಳ ಮಾನ್ಯತೆ ಪ್ರಶ್ನೆಯನ್ನು ಪ್ರಜಾಪ್ರಭುತ್ವದನ್ವಯ ನಿರ್ಧರಿಸಬೇಕಿತ್ತು. ಆದರೆ 1996 ರಿಂದ ಇದುವರೆಗೂ ಚುನಾವಣೆ ಮಾಡದೆ ಕಾರ್ಮಿಕರ ಬಹುಮತ ಕಳೆದುಕೊಂಡಿರುವ ಸಂಘಕ್ಕೆ ಮಾನ್ಯತೆ ಮುಂದುವರಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಹೀಗಾಗು ಕೂಡಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡಬೇಕು. ಸಾರಿಗೆ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಹಾಗೂ ಸಂಸ್ಥೆಯ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸದ್ಯಕ್ಕೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದಿನಿಂದ ಆರಂಭವಾಗಿದ್ದು, ಇದು ಯಾವ ರೀತಿ ಸಫಲತೆ ಹೊಂದುತ್ತದೆ ಎಂಬುದರ ಬಗ್ಗೆ ನೌಕರರ ಕಾದು ನೋಡುತ್ತಿದ್ದಾರೆ. ಕಾರಣ ಈ ಹಿಂದೆ ಇದೇ ರೀತಿ ಧರಣಿ ಮಾಡಿ ಯಾವುದೇ ಪ್ರತಿಫಲವನ್ನು ಪಡೆಯದೆ ವಾಪಸ್ ಆಗಿದ್ದರ ಬಗ್ಗೆ ಬಹುತೇಕ ನೌಕರರಲ್ಲಿ ಅಸಮಾಧಾನವಿದೆ.