- ಸಾರಿಗೆ ನೌಕರರ ಸಂಘಟನೆಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವಿದು
- ನಿರಾಸೆ ಬೇಡ ಮುಂದಿನ ಸಭೆಯವರೆಗೂ ಕಾಯಿರಿ ಆಗ ನಿಮಗೂ ಸಿಗಬಹುದು ಬೆಲ್ಲ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸಿ 2020ರ ನಂತರ 2023ರ ಮಾರ್ಚ್ ಒಳಗಡೆ ನಿವೃತ್ತರಾಗಿರುವ ನೌಕರರಿಗೆ ವೇತನ ಹೆಚ್ಚಳದ ಹಿಂಬಾಕಿ ಕೊಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.
ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 2020ರ ಜನವರಿ 1ರಿಂದ ಶೇ.15ರಷ್ಟು ಹೆಚ್ಚಳವಾಗಿರುವ ವೇತನದ 38 ತಿಂಗಳ ಹಿಂಬಾಕಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರಿಗೆ ಕೊಡುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಮಾಡೋಣ ಸದ್ಯಕ್ಕೆ ಈ ಅವಧಿಯಲ್ಲಿ ನಿವೃತ್ತರಾಗಿರುವ ಅಧಿಕಾರಿಗಳು ಮತ್ತು ನೌಕರರಿಗೆ ಹಿಂಬಾಕಿ ಪಾವತಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಅದಕ್ಕೆ ಕೆಲ ಸಂಘಟನೆಗಳ ಮುಖಂಡರು ಯಾವುದೇ ಚಕಾರವೆತ್ತದೆ ಸಚಿವರ ತೀರ್ಮಾನವನ್ನು ಅತ್ಯಂತ ಗೌರವದಿಂದ ಒಪ್ಪಿಕೊಂಡಿದ್ದಾರೆ. ಆದರೆ, ಕೆಲ ಮುಖಂಡರು ನೀವು ಹೀಗೆ ಮಾಡಿದರೆ ನಾವು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಏನು ಉತ್ತರ ಕೊಡಬೇಕು? ಇದು ಆಗದ ಕೆಲಸ ಎಲ್ಲರಿಗೂ ಹಿಂಬಾಕಿ ಪಾವತಿಸಬೇಕು ಎಂದು ಒತ್ತಾಯ ಮಾಡಿದರು.
ಆದರೆ, ಸಚಿವರು ಇದು ನಮ್ಮ ಸರ್ಕಾರ ಬಂದಮೇಲೆ ಮಾಡುತ್ತಿರುವ ಮೊದಲ ಸಭೆಯಾಗಿದ್ದು, ಮುಂದಿನ ಸಭೆಯಲ್ಲಿ ಎಲ್ಲರೂ ಮತ್ತು ಒಟ್ಟಾಗಿ ಚರ್ಚಿಸಿ ಒಂದು ತೀರ್ಮಾನ ಮಾಡೋಣ ಎಂದು ಸಮಾಧಾನಪಡಿಸಿದರು ಎನ್ನಲಾಗಿದೆ.
ಒಟ್ಟಾರೆ, ಇಂದಿನ ಸಭೆಯಲ್ಲಿ ನೌಕರರ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು, ನೌಕರರ ಪರವಾದ ಕಾಳಜಿಯೊಂದಿಗೆ ಸಭೆಯಲ್ಲಿ ಯಾರೊಬ್ಬರು ಸಚಿವರಿಗೆ ಪ್ರಸ್ತುತ ನೌಕರರ ಪರಿಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಲಿಲ್ಲ ಎಂಬುದರ ಬಗ್ಗೆ ಕೆಲ ಸಂಘಟನೆಗಳ ಪದಾಧಿಕಾರಿಗಳೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಇಲ್ಲ ಎಲ್ಲವನ್ನು ನೋಡಿದರೆ ನಮಗೆ ತುಂಬ ಬೇಸರವಾಗುತ್ತಿದೆ. ಈ ಸಂಘಟನೆಗಳ ಮುಖಂಡರು ನಮ್ಮ ಪರವಾಗಿ ಧ್ವನಿ ಎತ್ತಲು ಹೋಗಿದ್ದರೋ ಇಲ್ಲ ಸಚವರು ಮತ್ತು ನಿಗಮದ ಅಧ್ಯಕ್ಷರನ್ನು ಓಲೈಸಿಕೊಳ್ಳಲು ಹೋಗಿದ್ದರೋ ಎಂಬುವುದು ತಿಳಿಯುತ್ತಿಲ್ಲ. ಸಭೆಯಲ್ಲಿ ಸಚಿವರು ಮಾತನಾಡಿದ್ದಕ್ಕೆಲ್ಲ ತಲೆಯಲ್ಲಾಡಿಸಿಕೊಂಡು ಹೊರ ಬಂದರು ಎಂದು ಸಭೆಯಲ್ಲಿದ್ದವರೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಇನ್ನು ನೌಕರರ ಪರ ಎಂದು ಹೇಳಿಕೊಂಡು ಹೋರಾಟಕ್ಕೆ ಕರೆ ನೀಡುವುದು ನಾಮ್ ಕೇ ವಾಸ್ತೆ ಎಂಬಂತೆ ಎನ್ನುವುದು ನಿಮ್ಮ ಈ ಸಭೆಯಲ್ಲಿನ ನಡವಳಿಕೆಯೇ ಸೂಚಿಸುತ್ತಿದೆ ಎಂದು ಕೆಲವರು ಸಂಘಟನೆಗಳ ಮುಖಂಡರ ವಿರುದ್ಧ ಮನಸ್ಸಿನಲ್ಲೇ ಶಪಿಸಿಕೊಂಡು ಹೊರ ನಡೆದರು ಎಂದು ತಿಳಿದು ಬಂದಿದೆ.
ಒಟ್ಟಾರೆ ನಿವೃತ್ತ ಸಾರಿಗೆ ನೌಕರರಿಗೆ ಇದು ಸಿಹಿ ವಿಷಯವಾದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತಾಗಿದೆ. ಈ ಬಗ್ಗೆ ಸಚಿವರು ಮತ್ತು ಆಡಳಿತ ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಎಂಬುದನ್ನು ಮುಂದಿನ ಸಭೆಯವರೆಗೂ ಕಾದು ನೋಡಬೇಕಿದೆ.