ಬೆಂಗಳೂರು: ಅಮ್ಮ ಚಿರತೆ ಮತ್ತು ಮರಿ ಚಿರತೆ ಹಾಡುಹಗಲೇ ರಸ್ತೆಗೆ ಬಂದಿದ್ದು, ಬಿಎಂಟಿಸಿ ಬಸ್ ಚಾಲಕನ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.
ಈ ಎರಡು ಚಿರತೆಗಳು ತುರಹಳ್ಳಿ ಫಾರೆಸ್ಟ್ನಿಂದ ತಪ್ಪಿಸಿಕೊಂಡು ಬಂದಿವೆ ಎಂದು ಹೇಳಲಾಗುತ್ತಿದೆ. ಕೆಂಗೇರಿ- ಬನಶಂಕರಿ ಮಾರ್ಗದಲ್ಲಿ ಸಂಚಾರಿಸುವ ಬಿಎಂಟಿಸಿ ಬಸ್ನ ಕೆಳಗೆ ಚಿರತೆಗಳು ಕಾಣಿಸಿಕೊಂಡಿವೆ.
ಇನ್ನು ಚಿರತೆಗಳು ಕಂಡ ಕೂಡಲೇ ಬಿಎಂಟಿಸಿ ಚಾಲಕ ಬಸ್ ನಿಲ್ಲಿಸಿದ್ದಾರೆ. ತಾಯಿ ಚಿರತೆ ತಪ್ಪಿಸಿಕೊಂಡಿದ್ದು, ಆ ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಬಳಿಕ ಆ ಮರಿಗೆ ನೀರು ಕುಡಿಸಲು ಮುಂದಾಗಿದ್ದ ಚಾಲಕನ ಮೇಲೆ ಮರಿ ಚಿರತೆ ಅಟ್ಯಾಕ್ ಮಾಡಲು ಮುಂದಾಗಿತ್ತು.
ಕೂಡಲೇ ಎಚ್ಚೆತುಕೊಂಡ ಚಾಲಕ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಸೂಚನೆ ನೀಡಿದರೂ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿ ರಕ್ಷಣೆ ಮಾಡಿದ್ದಾರೆ.
ಇನ್ನು ತಪ್ಪಿಸಿಕೊಂಡ ತಾಯಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಕೆಂಗೇರಿ – ಬನಶಂಕರಿ ಮಾರ್ಗವಾಗಿ ಓಡಾಡುವ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.