ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಆಟೋ ನಡುವೆ ಇಂದು ಮಧ್ಯಾಹ್ನ ತಾಲೂಕಿನ ತನ್ಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ತನ್ಗೆರೆ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಆಟೋದಲ್ಲಿದ್ದ ಚೆಲುವಿನಹಳ್ಳಿ ಗ್ರಾಮದ ಒಬ್ಬ ಬಾಲಕ ಮತ್ತು ಚಾಲಕ ಸೇರಿ 6 ಜನರಿದ್ದರು. ಅವರಲ್ಲಿ ಓರ್ವ ಮಹಿಳೆ ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಮೃತಪಟ್ಟರೆ ಆಟೋ ಚಾಲಕ ಸೇರಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಆಟೋದಲ್ಲಿದ್ದ ಬಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದೇನೆ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಸಾರಿಗೆ ನಿಗಮದ ಚಾಮರಾಜನಗರ ಘಟಕದ ಡಿಎಂ, ಡಿಎಂಇ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿದ್ದು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿದ್ದಾರೆ.
ಘಟನೆ ವಿವರ: ಸಾರಿಗೆ ಸಂಸ್ಥೆಯ ಚಾಲಕನನ್ನು ಗುತ್ತಿಗೆ ಆಧಾರ ಮೇಲೆ ಅಂದರೆ ದಿನಕ್ಕೆ 1 ಸಾವಿರ ರೂಪಾಯಿ ಕೂಲಿ ಕೊಡುವ ಆಧಾರ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಅಪಘಾತವಾಗಿರುವ ಬಸ್ ಇಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರದಿಂದ ಕೊಳ್ಳೇಗಾಲ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಇನ್ನು ಈ ಗುತ್ತಿಗೆ ಆಧಾರ ಮೇಲೆ ನೇಮಕಗೊಂಡಿರುವ ಚಾಲಕ ನಿತ್ಯ 380 ಕಿಲೋ ಮೀಟರ್ ಬಸ್ ಓಡಿಸುತ್ತಿದ್ದು, ನೈಟ್‌ಹಾಲ್ಟ್ ಬಸ್ ಆಗಿರುವುದರಿಂದ ಒಟ್ಟು 760 ಕಿಲೋ ಮೀಟರ್ ಬಸ್ ಓಡಿಸುತ್ತಿದ್ದರು ಎಂದು ನಿಗಮದ ನೌಕರರು ತಿಳಿಸಿದ್ದಾರೆ.
ಅಲ್ಲದೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಚಾಲಕರಿಗೆ ಯಾವುದೇ ತರಬೇತಿಯನ್ನು ನೀಡದೆ ಏಕಾಏಕಿ ಬಸ್ ಚಾಲನೆ ಮಾಡುವುದಕ್ಕೆ ಬಿಡುತ್ತಿರುವುದರಿಂದ ಈ ರೀತಿ ಅಪಘಾತಗಳು ಸಂಭವಿಸುತ್ತಿವೆ ಇದರಿಂದ ಸಂಸ್ಥೆಗೆ ಮತ್ತು ಸಂಸ್ಥೆಯ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.