43 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢ
ನ್ಯೂಡೆಲ್ಲಿಯಲ್ಲಿನಡೆದ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ
ಬೆಂಗಳೂರು ಗ್ರಾಮಾಂತರ: ರಾಜಧಾನಿಯ ಮೊಗ್ಗಲಲ್ಲೇ ಇದ್ದ ಜಿಲ್ಲೆ ಕೊರೊನಾ ಸೋಂಕಿನಿಂದ ದೂರವೆ ಇತ್ತು. ಆದರೆ ನ್ಯೂಡೆಲ್ಲಿಗೆ ಹೋಗಿದ್ದ ವ್ಯಕ್ತಿ ಜಿಲ್ಲೆಗೆ ಕೊರೊನಾ ಸೋಂಕನ್ನು ಹಬ್ಬಿಸಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಂಕು ದೃಢಪಟ್ಟಿದೆ.
ನ್ಯೂಡೆಲ್ಲಿಯಲ್ಲಿಮಾರ್ಚ್ 13 ರಿಂದ 18 ರವರೆಗೆ ನಡೆದ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ, ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲನರಸಾಪುರ ಗ್ರಾಮದ 43 ವರ್ಷದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿದ್ದು, ಈತನನ್ನು ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವ್ಯಕ್ತಿಯನ್ನು ಮಾರ್ಚ್ 31 ರಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿತ್ತು. ನಂತರ ಏಪ್ರಿಲ್ 5 ರಂದು ರಕ್ತ ಪರೀಕ್ಷೆ ಮಾಡಿದಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 4 ಇದ್ದು, ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಈವರೆಗೆ 4421 ಮಂದಿಗೆ ಸೋಂಕು ದೃಢಪಟ್ಟಿದ್ದು, 114ಮಂದಿ ಮೃತಪಟ್ಟಿದ್ದಾರೆ.
ವಿಶ್ವಾದ್ಯಂತ 12.35 ಲಕ್ಷ ಸೋಂಕಿತರಿದ್ದು, 71ಸಾವಿರ ಮಂದಿ ಮೃತಪಟ್ಟಿದ್ದಾರೆ. ಇನ್ನು ರಾಜ್ಯದಲ್ಲಿ ಮೈಸೂರು, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೆ ಇದೆ. ಹೀಗಾಗಿ ಜನರು ಎಚ್ಚರಿಕೆ ವಹಸಿ ಮನೆಯಲ್ಲೇ ಇರಿ ಎಂದು ಸಿಎಂ ಮನವಿ ಮಾಡುತ್ತಿದ್ದಾರೆ.