ಮುಂಬೈ: ಜಾರಿ ನಿರ್ದೇಶನಾಲಯ ಬರೋಬ್ಬರಿ 98 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಶಿಲ್ಪಾ ಶೆಟ್ಟಿ ಅವರ ಫ್ಲಾಟ್ ಅನ್ನು ವಶಪಡಿಸಿಕೊಂಡಿದೆ. ಈ ಮೂಲಕ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ – ಉದ್ಯಮಿ ರಾಜ್ ಕುಂದ್ರಾ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ED ಇಂದು ರಾಜ್ ಕುಂದ್ರಾ ಅವರಿಗೆ ಸಂಬಂಧ ಪಟ್ಟ 97.79 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.
ಅಲ್ಲದೆ ಇದರ ಜತೆಗೆ ಮುಂಬೈನ ಜುಹುನಲ್ಲಿರುವ ಫ್ಲಾಟ್‌ಅನ್ನು ಕೂಡ ತನ್ನ ಸುಪರ್ದಿಗೆ ಪಡೆದುಕೊಂಡಿದ್ದು, ಈ ಜುಹುನಲ್ಲಿರುವ ಫ್ಲಾಟ್ ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿದೆ.
ಉದ್ಯಮಿ ಹಾಗೂ ಬಾಲಿವುಡ್ ನಟ ರಾಜ್ ಕುಂದ್ರಾ ಅವರನ್ನು ಬಿಟ್‌ಕಾಯಿನ್ ಸೇರಿದಂತೆ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು. ರಾಜ್ ಕುಂದ್ರಾ ಅವರಿಗೆ ಸಂಬಂಧಪಟ್ಟ ಸ್ಥಿರ ಮತ್ತು ಚರ ಆಸ್ತಿಯ ಜತೆಗೆ ಪುಣೆಯಲ್ಲಿರುವ ಬಂಗ್ಲೆ ಮತ್ತು ಷೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2017ರಲ್ಲೇ ಇಡಿ ಅಧಿಕಾರಿಗಳು ಬಿಟ್ ಕಾಯಿನ್ ಅಲ್ಲಿ 6,600 ಕೋಟಿ ರೂ. ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬಿಟ್‌ಕಾಯಿನ್ ಮೂಲಕ ಹಲವರಿಗೆ ಶೇಕಡಾ 10 ರಷ್ಟು ಹಣ ರಿಟರ್ನ್ ಮಾಡುವ ಭರವಸೆ ನೀಡಿ ಮೋಸ ಮಾಡಿದ ಆರೋಪ ಕೇಳಿ ಬಂದಿತ್ತು.
ಇನ್ನು ಇದೇ ಹಗರಣದಲ್ಲಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಇದೀಗ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.