ಚಾಮರಾಜನಗರ: ಅಮೆರಿಕದ ನ್ಯೂಯಾರ್ಕ್ ನಗರದ ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ಪ್ರಮುಖ ಹುಲಿ ಸಂರಕ್ಷಿತ ಅಭಯಾರಣ್ಯ ಪ್ರದೇಶ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲೂ ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿ ಹಾಗೂ ಕೆಲವು ಸಿಂಹಗಳಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಬಗ್ಗೆ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲೂ ಅರಣ್ಯದಲ್ಲಿರುವ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಸರ್ಕಾರದಿಂದ ಆದೇಶ ಬಂದಿದೆ ಎಂದು ವಿವರಿಸಿದರು.
ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನ ಹುಲಿ ರಕ್ಷತಾ ಧಾಮ ಹಾಗೂ ಬಂಡೀಪುರ ಹುಲಿ ರಕ್ಷಿತಾ ಅಭಯಾರಣ್ಯ ಪ್ರದೇಶಗಳ ವ್ಯಾಪ್ತಿಯು ಅತ್ಯಂತ ಹೆಚ್ಚು ಸಂಖ್ಯೆಯ ಹುಲಿಗಳ ಆಶ್ರಯತಾಣವಾಗಿದೆ. ಮಲೆ ಮಹದೇಶ್ವರ, ಕಾವೇರಿ ವನ್ಯಜೀವಿ ಧಾಮಗಳು ಇವೆ. ಒಟ್ಟಾರೆ ಹುಲಿ ಗಣತಿಯ ಪ್ರಕಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 218 ಹುಲಿಗಳು ಇವೆ. ಹೀಗಾಗಿ ಅಧಿಕಾರಿಗಳು ಅತ್ಯಂತ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬೆಕ್ಕಿನ ಪ್ರಭೇದ ಪ್ರಾಣಿಗಳಿಗೆ ಸೋಂಕು ತಗುಲುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಹುಲಿ, ಚಿರತೆ, ಸಿಂಹದಂತಹ ಬೆಕ್ಕಿನ ಜಾತಿಗೆ ಬರುವ ಪ್ರಾಣಿಗಳ ಆರೋಗ್ಯ ಚಲನ ವಲನದ ಮೇಲೆ ನಿಗಾ ಇರಿಸಬೇಕು ಎಂದರು.
ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪ್ರಾಣಿಗಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಬಂಡೀಪುರ ಹುಲಿ ಯೋಜನೆ ನಿರ್ದೇಶಕರ ನೇತೃತ್ವದ ಟಾಸ್ಕ್‍ಪೋರ್ಸ್‍ನ್ನು ಕೂಡಲೇ ರಚಿಸಬೇಕು. ಅರಣ್ಯ, ಕಂದಾಯ, ಪಶುಪಾಲನೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇರುವ ಟಾಸ್ಕ್‍ಪೋರ್ಸ್ ಸಮಿತಿ ಕೂಡಲೇ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಡುಪ್ರಾಣಿಗಳ ವರ್ತನೆ ಬಗ್ಗೆಗಮನ ಹರಿಸಿ
ಕಾಡುಪ್ರಾಣಿಗಳ ವರ್ತನೆ ಬಗ್ಗೆ ಪ್ರತಿನಿತ್ಯವು ಗಮನ ಹರಿಸಬೇಕು. ಅರಣ್ಯದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾ ಹಾಗೂ ಇನ್ನಿತರ ಅತ್ಯಾಧುನಿಕ ಸಲಕರಣೆಗಳ ಸಹಾಯದಿಂದ ಪ್ರಾಣಿಗಳ ಚಲನ-ವಲನ ಸಹಜ ಸ್ಥಿತಿ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ಶಂಕಿತ ಪ್ರಕರಣಗಳು ಕಂಡುಬಂದರೆ ಕೂಡಲೇ ಔಷಧೋಪಚಾರ, ಸಂರಕ್ಷಣೆಯ ಕ್ರಮಗಳಿಗೆ ಮುಂದಾಗಬೇಕು. ವನ್ಯಜೀವಿಗಳ ಆರೋಗ್ಯ ಸಂಬಂಧ ನಿಗಾ ವಹಿಸಲು ನೋಡೆಲ್ ಅಧಿಕಾರಿ ನೇಮಕ ಮಾಡಬೇಕು. ಅಲ್ಲದೆ ಯಾವುದೇ ಮಾಹಿತಿ, ವಿಷಯ, ದೂರುಗಳು, ನೆರವಿಗೆ ಅರಣ್ಯ ಇಲಾಖೆಯ 1926 ಸಂಖ್ಯೆ ಉಚಿತ ದೂರವಾಣಿಗೆ ಕರೆ ಮಾಡಲು ಜಾಗೃತಿ ಮೂಡಿಸಬೇಕು ಎಂದರು.
ಜಾನುವಾರುಗಳ ಬಿಡಬೇಡಿ
ಕಾಡಂಚಿನ ಪ್ರದೇಶಗಳ ವ್ಯಾಪ್ತಿ ಅಥವಾ ಇದರ ಹತ್ತಿರದ ಪ್ರದೇಶದಲ್ಲಿ ಮೇವಿಗಾಗಿ ಜಾನುವಾರುಗಳನ್ನು ಬಿಡುವುದನ್ನು ನಿಲ್ಲಿಸಬೇಕು. ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವ ಅರಣ್ಯ ಸಿಬ್ಬಂದಿಗೆ ಆರೋಗ್ಯ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಜಿಲ್ಲೆಯ ಎಲ್ಲಾ ಅಭಯಾರಣ್ಯ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸದಂತೆ ಆದೇಶ ಹೊರಡಿಸಲಾಗಿದೆ. ಅರಣ್ಯ ಸಿಬ್ಬಂದಿ ಪಶು ವೈದ್ಯಕೀಯ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನೆರವು ಪಡೆದು ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ವಹಿಸಬೇಕು ಎಂದರು.
ಗರಿಷ್ಠ ಪ್ರಮಾಣದಲ್ಲಿ ಎಚ್ಚರಿಕೆ
ಸಹಜ ನೆಲೆಯಲ್ಲಿರುವ ವನ್ಯಮೃಗಗಳ ರಕ್ಷಣೆ ಮಾಡುವುದು ಇಂದಿನ ಅದ್ಯ ಕರ್ತವ್ಯವಾಗಿದೆ. ಜಿಲ್ಲೆಯ ಒಟ್ಟಾರೆ ಶೇ. 50ಕ್ಕೂ ಹೆಚ್ಚು ಅರಣ್ಯ ಪ್ರದೇಶ ಸಂಪತ್ತು ಹಾಗೂ ವಿಶಿಷ್ಟ ವನ್ಯಜೀವಿಗಳನ್ನು ಹೊಂದಿರುವ ಅದರಲ್ಲೂ ಹೆಚ್ಚು ಸಂಖ್ಯೆಯ ಹುಲಿಗಳ ಆಶ್ರಯಕ್ಕೆ ಹೆಸರುವಾಸಿಯಾಗಿರುವ ಎರಡು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಾಣಿಸಿಕೊಳ್ಳದಂತೆ ಗರಿಷ್ಠ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ, ಬಿ.ಆರ್.ಟಿ. ಸಹಾಯಕ ಸಂರಕ್ಷಣಾಧಿಕಾರಿ ರಮೇಶ್, ಹೆಚ್ಚುವರಿ ಜಿಲ್ಲಧಿಕಾರಿ ಸಿ.ಎಲ್. ಆನಂದ್, ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕರಾದ ಡಾ. ವೀರಭದ್ರಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.