ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್‌ನಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು 4 ಅಡಿ ಎತ್ತರದ ರಸ್ತೆ ವಿಭಜಕವನ್ನು ದಾಟಿ ಎದುರು ರಸ್ತೆಗೆ ಡಿವೈಡರ್ ಮೇಲೆ ಬಸ್ ಬಂದು ನಿಂತಿದೆ.
ಬೆಂಗಳೂರು – ಸೋಮವಾರಪೇಟೆ ಬಸ್ ಅಪಘಾತಕ್ಕೀಡಾಗಿದೆ. ಈ ಬಸ್‌ನಲ್ಲಿ ಹಲವಾರು ಮಂದಿ ಪ್ರಯಾಣಿಸುತ್ತಿದ್ದರು. ಬಸ್‌ನ ಮುಂಭಾಗದಲ್ಲಿ ಕುಳಿತಿದ್ದವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ರಭಸಕ್ಕೆ ಸದ್ಯ ಸೇತುವೆಯಿಂದ ಕೆಳಕ್ಕೆ ಬೀಳುವುದಕ್ಕೆ ಅವಕಾಶವಿಲ್ಲದಂತೆ ಮುಂದಿನ ಡಿವೈಡರ್‌ಗೆ ಜಂಪ್ ಮಾಡಿರುವುದು ಭಯನಕವಾಗಿದೆ. ಅಲ್ಲದೆ ಒಂದು ವೇಳೆ ಬಸ್ ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದಿದ್ದರೆ ಎಂಥಾ ಅನಾಹುತ ಸಂಭವಿಸುತ್ತಿತ್ತೋ ಹೇಳಲಸಾಧ್ಯವಾಗಿದೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿವೈಡರ್‌ಗೆ ಬಸ್ ಡಿಕ್ಕಿ ಹೊಡೆದು ನಿಂತಿದ್ದರಿಂದ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಕ್ರೇನ್ ಸಹಾಯದಿಂದ ಬಸ್ ತೆರವುಗೊಳಿಸಲಾಯಿತು.
ಈ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.