ಬೆಳಗಾವಿ: ಜಾತ್ರೆಯಲ್ಲಿ ತಯಾರಿಸಿದ್ದ ಪ್ರಸಾದ ಸೇವನೆ ಮಾಡಿದ 50ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಭೀರೇಶ್ವರ ಮತ್ತು ಕರೆಮ್ಮದೇವಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ಜಾತ್ರೆಯಲ್ಲಿ ಅನ್ನ, ಮಾವಿನ ಹಣ್ಣಿನ ಶೀಖರಣಿ ಪ್ರಸಾದ ಮಾಡಲಾಗಿದ್ದು ಆ ಪ್ರಸಾದ ಸೇವಿಸಿದ 51 ಜನರಿಗೆ ಏಕಾಏಕಿ ವಾಂತಿಬೇಧಿ ಆಗಿದೆ.
ಕೂಡಲೇ ಅಸ್ವಸ್ಥಗೊಂಡವರನ್ನು ಸ್ಥಳೀಯ ಹಾಗೂ ಸವದತ್ತಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ನೀಡಲಾಗುತ್ತಿದ್ದು, ಅವರಲ್ಲಿ ಐವರ ಸ್ಥತಿ ಗಂಭೀರವಾಗಿದ್ದು ಅವರನ್ನು ಪ್ರಥಮ ಚಿಕಿತ್ಸೆ ಬಳಿಕ ಧಾರವಾಡದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.
ಘಟನೆ ಜರುಗಿದ ಬಳಿಕ ಹೆಚ್ಚಿನ ಅನಾಹುತ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸದ್ಯ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಈವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಶ ಜೋಶಿ ಮಾಹಿತಿ ನೀಡಿದ್ದು, ಶಾಸಕ ವಿಶ್ವಾಸ ವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.