ಬೆಂಗಳೂರು: ಖತರ್ನಾಕ್ ಕಳ್ಳ-ಕಳ್ಳಿ ಇಬ್ಬರು ಅಕ್ಕ ತಮ್ಮನಾಗಿದ್ದು, ಕಿಟಕಿ ಮೂಲಕ ಮನೆ ಹಾಗೂ ಅಂಗಡಿಗಳಿಗೆ ನುಸುಳಿಕೊಂಡು ಹೋಗಿ ಗಲ್ಲಪೆಟ್ಟಿಗೆಯಲ್ಲಿ ಸಿಕ್ಕಷ್ಟು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಸದ್ಯ ಕಳ್ಳ ಕಳ್ಳಿ ಅಕ್ಕ-ತಮ್ಮನನ್ನು ಬಸವೇಶ್ವರ ನಗರ ಪೊಲೀಸರು ಬೇಟೆಯಾಡಿದ್ದು, 4 ಲಕ್ಷದ 50 ಸಾವಿರ ರೂ. ನಗದು ಹಾಗೂ ಒಂದು ಇಂಡಿಗೋ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆನಂದ್ ಹಾಗೂ ಗಾಯತ್ರಿ ಎಂಬುವರೆ ಖತರ್ನಾಕ್ ಕಳ್ಳರಾಗಿದ್ದು, ಆರೋಪಿಗಳು ಮನೆ ಹಾಗೂ ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಬಳಿಕ ಸಂಸಾರ ಸಮೇತ ಗೋವಾ ಟ್ರಿಪ್ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಇತ್ತೀಚೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಡಯಾಗ್ನಾಸ್ಟಿಕ್ ಸೆಂಟರ್ನ ಕಿಟಕಿಯ ಎಕ್ಸಾಸ್ಟಿಂಗ್ ಫ್ಯಾನ್ ಬಿಚ್ಚಿ ಖದೀಮರು ಒಳನುಗ್ಗಿದ್ದರು. ನಂತರ ಅಲ್ಲಿದ್ದ 8 ಲಕ್ಷ 20 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಅದರಲ್ಲಿ 3 ಲಕ್ಷ ಹಣವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆನಂದ್, ಉಳಿದ 5 ಲಕ್ಷ ರೂ.ಗಳನ್ನು ಅಕ್ಕ ಗಾಯತ್ರಿಗೆ ಕೊಟ್ಟಿದ್ದ.
ಕಳವು ಮಾಡಿ ದೋಚಿದ ಹಣದಲ್ಲಿ ಫ್ಯಾಮಿಲಿಯನ್ನು ಗೋವಾ ಟ್ರಿಪ್ಗೆ ಕರೆದುಕೊಂಡು ಹೋಗಿದ್ದರು. ಪೊಲೀಸರ ತನಿಖೆ ವೇಳೆ ಆನಂದ್ ತನ್ನ ಅಕ್ಕನಿಗೆ ಹಣ ಕೊಟ್ಟಿರುವುದಾಗಿ ಹೇಳಿದ್ದ.ಕೊನೆಗೆ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ.
ಸದ್ಯ ಬಂಧಿತರಿಂದ 4 ಲಕ್ಷದ 50 ಸಾವಿರ ರೂ. ನಗದು ಹಾಗೂ ಒಂದು ಇಂಡಿಗೋ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, 15ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಗಳನ್ನು ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.