ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕುರಿ ಮೇಯಿಸಲು ಹೋದಾಗ ಜೋರು ಮಳೆ ಬಂದಿದ್ದು, ಈ ವೇಳೆ, ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಂಭವಿಸಿದೆ.
ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ನಿವಾಸಿಗಳಾದ ಬೀರಪ್ಪ (45), ಸುನೀಲ (26), ವಿನೋದ್ (14) ಮೃತರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಈ ಪೂರ್ವ ಮುಂಗಾರು ಮಳೆಗೆ ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಹಲವು ಮನೆಗಳಿಗೆ ಹಾನಿಯಾಗಿದೆ. ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (47) ಮೃತರು. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದೆ. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದಲ್ಲಿ ರೈತ ಸಿದ್ದಪ್ಪ ಉಂಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊಂತಿಕೊಂಡಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ರೈತನೋರ್ವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹುಲಿಹೈದರದಲ್ಲಿ ಗ್ರಾಮದಲ್ಲಿ ಯಂಕಪ್ಪ ಜಾಡಿ (45) ಮೃತ ರೈತರು. ಇದೇ ವೇಳೆ ಎರಡು ಎತ್ತುಗಳೂ ಸಹ ಮೃತಪಟ್ಟಿವೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಗೆದ್ಲೆಹಳ್ಳಿಗ್ರಾಮದ ಲೋಕೇಶಪ್ಪ (65) ಮೃತ. ಕುರಿ ಮೇಯಿಸಲು ತೆರಳಿದ್ದಾಗ ಅವಘಡ ಸಂಭವಿಸಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ. ಎರಡೂ ಮನೆಯ ಕುಟುಂಬದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುತ್ ದೀಪಗಳು, ಯಂತ್ರೋಪಕರಣಗಳಿಗೆ ಭಾಗಶಃ ಹಾನಿಯಾಗಿದೆ. ಮನೆಯ ಎದುರಿನ ತೆಂಗಿನ ಮರ, ಮನೆಯ ಗೋಡೆಗೆ ಸಿಡಿಲು ಬಡಿದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Related
