ಬೆಂಗಳೂರು: 2024ರ ಲೋಕಸಭೆ ಚುನಾವಣೆ ಮುಗಿದು ಫಲಿತಾಂಶವು ಬಂದಾಗಿದೆ. ಈ ಬಳಿಕ ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 01-01-2024ರಿಂದ ಜಾರಿಯಾಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ಬಹುತೇಕ ಸಾರಿಗೆಯ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಗೌಪ್ಯವಾಗಿ ಸಭೆ ನಡೆಸುತ್ತಿದ್ದಾರೆ.
ಅಲ್ಲದೆ ಈವರೆಗೂ ನೌಕರರು ಮತ್ತು ಅಧಿಕಾರಿಗಳ ಅಭಿಪ್ರಾಯ (Opinion) ಪಡೆಯದೆ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಕರೆದ ಸಭೆಗೆ ಹೋಗಿ ತಮಗಿಷ್ಟ ಬಂದರೀತಿ ವೇತನ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದ ಸಂಘಟನೆಗಳ ಪ್ರಮುಖರು ಈಗ ಸಾರಿಗೆ ಡಿಸಿಯಿಂದ ಹಿಡಿದು ಸಂಸ್ಥೆಯಲ್ಲಿರುವ ಕಚೇರಿ ಸಹಾಯಕರ (Office Assistant) ವರೆಗೂ ಅವರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ 2024ರ ವೇತನ ಪರಿಷ್ಕರಣೆಯಲ್ಲಿ ವೇತನ ಎಷ್ಟು ಹೆಚ್ಚಳವಾಗಬೇಕು. ಈಗಿರುವ ಸಮಸ್ಯೆಗಳೇನು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಏನು ಮಾಡಬೇಕು? ಹೀಗೆ ಹಲವಾರು ರೀತಿಯ ಪ್ರಶ್ನೆಗಳನ್ನು ಅಧಿಕಾರಿಗಳು/ ಸಿಬ್ಬಂದಿಗಳನ್ನು ಕೇಳಿ ಸರ್ಕಾರ ಮತ್ತು ಆಡಳಿತ ಮಂಡಳಿ ಮುಂದಿಡುವುದಕ್ಕೆ ಬಹುತೇಕ ಎಲ್ಲ ಸಂಘಟನೆಗಳ ನಾಯಕರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಇನ್ನು ವಿಜಯಪಥ ವರದಿಯಿಂದ ಎಚ್ಚೆತ್ತ ಕೆಲ ಸಂಘಟನೆಗಳ ನಾಯಕರು, ಜನವರಿ 1- 2024ರ ವೇತನ ಪರಿಷ್ಕರಣೆ ಬಗ್ಗೆ ಗಂಭೀರವಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಇದರಷ್ಟೆ ಪ್ರಮುಖವಾದ 2020ರ ವೇತನ ಹೆಚ್ಚಳ ಬರಬೇಕಿರುವ 38 ತಿಂಗಳ ಹಿಂಬಾಕಿಯ ಬಗ್ಗೆಯೂ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಅಲ್ಲದೆ ನೌಕರರಿಗೆ ಕಾರ್ಮಿಕ ಇಲಾಖೆಯ ನಿಯಮವನ್ನೇ ಗಾಳಿಗೆ ತೂರಿ ವಾರದಲ್ಲಿ ಒಂದು ದಿನ ಗೈರಾದರೂ ವಾರದ ರಜೆಯನ್ನು ಗೈರು ಹಾಜರಿ ಎಂದು ಪರಿಗಣಿಸುತ್ತಿರುವ ಅಧಿಕಾರಿಗಳ ನಡೆಯ ಬಗ್ಗೆ ಹೋರಾಟ ಮಾಡುವುದಕ್ಕೂ ಮತ್ತು ಎಚ್ಚರಿಕೆ ಕೊಡುವುದಕ್ಕೂ ಕೆಲ ಸಂಘಟನೆಗಳು ಈಗಾಗಲೇ ತೆರೆ ಮರೆಯಲ್ಲಿ ಸಭೆ ನಡೆಸಿವೆ.
ಈವರೆಗೂ ನಗದು ರಹಿತ ಆರೋಗ್ಯ ವಿಮೆ ಜಾರಿಯಾಗದ ಪರಿಣಾಮ ಅನಾರೋಗ್ಯದಿಂದ ಬಳಲಿ ಜೀವ ಕಳೆದುಕೊಳ್ಳುತ್ತಿರುವ ನಾಲ್ಕು ಸಾರಿಗೆ ನಿಗಮಗಳ ನೌಕರರು ಹಾಗೂ ಅವರ ಕುಟುಂಬಸ್ಥರಿಗೆ ನಗದು ರಹಿತ ಆರೋಗ್ಯ ವಿಮೆ ಯೋಜನೆ ಜಾರಿ ಮಾಡುವುದಕ್ಕೆ ಸರ್ಕಾರ ಮತ್ತು ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುವುದಕ್ಕೂ ಸಿದ್ಧತೆ ನಡೆಸುತ್ತಿವೆ.
ಇನ್ನು ಈಗಲೂ ಕೆಲ ನೌಕರರು ಮತ್ತು ಬಹುತೇಕ ಎಲ್ಲ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದರಿಂದ ಸಾರಿಗೆ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ನೌಕರರು/ ಅಧಿಕಾರಿಗಳಿಗೆ ಸಿಗಬೇಕಿರುವ ಸೌಲಭ್ಯಗಳು ಈವರೆಗೂ ಸಿಗದಂತಾಗಿವೆ. ಹೀಗಾಗಿ ಇನ್ನಾದರೂ ನಾವು ಒಗ್ಗಟ್ಟಾಗಿರೋಣ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳೋಣ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಸಾಥ್ ಕೊಡುವುದಕ್ಕೂ ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೆಲ ಸಂಘನಟೆಗಳು ಈಗಾಗಲೇ ಈ ನಿಟ್ಟಿನಲ್ಲಿ ತಮ್ಮ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ್ದು, ಇನ್ನುಳಿದ ಸಂಘಟನೆಗಳು ಈ ತಿಂಗಳೊಳಗೆ ಎಲ್ಲ ನೌಕರರ ಅಭಿಪ್ರಾಯ ಸಂಗ್ರಹಿಸಲು ಸಭೆಗಳನ್ನು ಆಯೋಜನೆ ಮಾಡುತ್ತಿವೆ. ಒಟ್ಟಾರೆ ಈ ತಿಂಗಳ ಅಂತ್ಯಕ್ಕೆ ಸಾರಿಗೆ ನಿಗಮಗಳ ಬಹುತೇಕ ಎಲ್ಲ ಸಂಘಟನೆಗಳು ಒಂದು ಸುತ್ತಿನ ಸಭೆ ನಡೆಸಿ ಬಳಿಕ ಸರ್ಕಾರ ಮತ್ತು ಆಡಳಿತ ಮಂಡಳಿಗಳ ಮುಂದೆ ಹೋಗುವುದಕ್ಕೆ ನೌಕರರ ಅಭಿಪ್ರಾಯವನ್ನು ಇದೇ ಮೊದಲ ಬಾರಿಗೆ ಸಂಗ್ರಹಿಸುತ್ತಿರುವುದು ಖುಷಿಯ ವಿಷಯವಾಗಿದೆ.