ಬೆಂಗಳೂರು: ರಾಜ್ಯವು ಕೋವಿಡ್-19 ಮಹಾಮಾರಿಯ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಗರ್‍ಹುಕುಂ ಭೂ ಸಾಗುವಳಿದಾರರ ಹಿತಕಾಯಲು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ-2011 ರ ಕೆಲವು ಪರಿಚ್ಛೇಧಗಳಿಗೆ ಸೂಕ್ತ ತಿದ್ದುಪಡಿ ಮಾಡಿ ಅಧ್ಯಾದೇಶ ಹೊರತರಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಇಲ್ಲಿ ಇಂದು ಈ ವಿಷಯವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಬಹಿರಂಗಪಡಿಸಿದರು.
ಭೂ ಕಬಳಿಕೆಯ ಕೃತ್ಯದ ಶೀಘ್ರ ವಿಚಾರಣೆಗೆ, ಕಬಳಿಕೆಯಾದ ಭೂಮಿಯ ಒಡೆತನ ಹಾಗೂ ಭೂ ಹಕ್ಕಿನ ಸ್ವಾಮ್ಯಕ್ಕೆ ಅಥವಾ ಕಾನೂನು ಸಮ್ಮತ ಸ್ವಾದೀನತೆಗೆ ಸಂಬಂಧಪಟ್ಟಂತೆ ಕರ್ನಾಟಕ ಭೂ ಕಂದಯ ಅಧಿನಿಯಮ-1964 ರ ಪರಿಚ್ಛೇಧ 14 ( ಎ ) ನಂತೆ ಜಾರಿಗೆ ಬಂದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ-2011 ರ ಅಡಿಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಿವಿಲ್ ನ್ಯಾಯಾಲಯಕ್ಕೆ ಇದ್ದ ಅಧಿಕಾರವನ್ನು ವರ್ಗಾವಣೆ ಮಾಡಿ ಈ ಪ್ರಕರಣಗಳ ಇತ್ಯರ್ಥ್ಯಕ್ಕಾಗಿಯೇ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ ಎಂದರು.
ಅದರಂತೆ, ಈ ಅಧಿನಿಯಮದಡಿ ಆರೋಪಿತರಾಗಿರುವ ರೈತರು ವಿಚಾರಣೆಗಾಗಿ ಬೆಂಗಳೂರಿಗೇ ಬರಬೇಕಾಗಿದೆ. ಪ್ರಸ್ತುತ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲಾ ರೈತರು ಬಾಧಿತರಾಗಿದ್ದರು.
ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯಿದೆ-1964 ರ ಪರಿಚ್ಛೇಧ 94 ( ಎ ) ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರ ಹಿತದೃಷ್ಟಿಯನ್ನು ಕಾಯ್ದುಕೊಳ್ಳಲು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ-2011 ಕ್ಕೆ ತಿದ್ದಪಡಿ ಮಾಡಿ, ಅಧ್ಯಾದೇಶ ಹೊರಡಿಸಲು ಸಂಪುಟ ಸರ್ವ ಸಮ್ಮತ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.