NEWSದೇಶ-ವಿದೇಶ

ಸುಪ್ರೀಂ ಕೋರ್ಟ್‌ 52ನೇ ಸಿಜೆಯಾಗಿ ನ್ಯಾ. ಬಿ.ಆರ್‌. ಗವಾಯಿ ಪ್ರಮಾಣ ವಚನ ಸ್ವೀಕಾರ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ (B.R. Gavai) ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಮಂಗಳವಾರ ನ್ಯಾಯಮೂರ್ತಿ ಸಂಜೀವ ಖನ್ನಾ ಅವರ ನಿವೃತ್ತಿ ಬಳಿಕ ಇಂದು ನ್ಯಾ.ಬಿ.ಆರ್ ಗವಾಯಿ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ್ದು, ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಆರ್.ಗವಾಯಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.

52ನೇ ಮುಖ್ಯ ನ್ಯಾಯಮೂರ್ತಿಯಾಗಿರುವ ಬಿ.ಆರ್. ಗವಾಯಿ ಅವರು 6 ತಿಂಗಳಿಗೂ ಹೆಚ್ಚಿನ ಅವಧಿ ಅಧಿಕಾರದಲ್ಲಿರಲಿದ್ದು, ಇದೇ ನ.23ರಂದು ನಿವೃತ್ತಿ ಹೊಂದಲಿದ್ದಾರೆ. ಜತೆಗೆ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ಮೊದಲ ಬೌದ್ಧ ಮತ್ತು ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ಎರಡನೇ ನ್ಯಾಯಾಧೀಶರಾಗಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ, ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಆ ಪೈಕಿ 2016ರ ನೋಟು ರದ್ದತಿ, ಚುನಾವಣಾ ಬಾಂಡ್ ಯೋಜನೆಯ ತೀರ್ಪು ಸೇರಿದಂತೆ ಒಟ್ಟು 300 ಮಹತ್ವದ ತೀರ್ಪುಗಳನ್ನು ನೀಡಿದ ನ್ಯಾಯಮೂರ್ತಿಗಳಾಗಿದ್ದಾರೆ.

Megha
the authorMegha

Leave a Reply

error: Content is protected !!